ರಾಣೇಬೆನ್ನೂರು, ಫೆ.6- ಕಳೆದ ಒಂದು ವಾರದಿಂದ ವ್ಯಾಪಾರ ವಹಿವಾಟು ಬಂದ್ ಮಾಡಿ ಎಪಿಎಂಸಿ ಕಛೇರಿ ಎದುರು ಧರಣಿ ನಡೆಸುತ್ತಿರುವ ಇಲ್ಲಿನ ವರ್ತಕರು ಮತ್ತು ಎಪಿಎಂಸಿ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆಗೆ ಪರಿಹಾರ ದೊರಕಿಸಲು ಶಾಸಕ ಪ್ರಕಾಶ ಕೋಳಿವಾಡ ನಡೆಸಿದ ಪ್ರಯತ್ನ ವಿಫಲಗೊಂಡಿದೆ.
ಹೂಲಿಹಳ್ಳಿ, ಕೂನಬೇವು ಮೆಗಾ ಮಾರುಕಟ್ಟೆಯಲ್ಲಿ ವರ್ತಕರಿಗೆ ನಿವೇಶನ ವಿತರಣೆಯಲ್ಲಿ ವಿಧಿಸಿರುವ ಷರತ್ತುಗಳಿಂದ ವರ್ತಕರಿಗೆ ಬಹಳಷ್ಟು ಅನ್ಯಾಯವಾಗಲಿದೆ ಎಂದು, ಜಮೀನು ಮಾಲೀಕರಿಗೆ ಪರಿಹಾರ ಕೊಡುವ, ಹೊರಗಿನ ವರ್ತಕರಿಗೆ ನಿವೇಶನ ಮೀಸಲಿಡುವ ಹಾಗೂ ದರ ನಿಗದಿಪಡಿಸಿರುವ ಷರತ್ತುಗಳನ್ನ ಹಿಂಪಡೆಯಬೇಕು ಎನ್ನುವುದು ವರ್ತಕರ ಬಲವಾದ ಬೇಡಿಕೆ ಇದೆ.
ಈ ಷರತ್ತುಗಳನ್ನು ವಿರೋಧಿಸಿ ಕಳೆದ ನಾಲ್ಕಾರು ವರ್ಷ ಗಳಿಂದ ವರ್ತಕರು ಸುಮಾರು 50ಕ್ಕೂ ಹೆಚ್ಚು ಮನವಿಗಳನ್ನು ಸ್ಥಳೀಯ ಹಾಗೂ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಿದ್ದರೂ ಸಹ ಅವುಗಳನ್ನು ಗಣನೆಗೆ ತೆಗೆದುಕೊಳ್ಳದೆ ಹಾಗೂ ವರ್ತಕರೊಂದಿಗೆ ಚರ್ಚಿಸದೆ ಅಧಿಕಾರಿಗಳು ನಿರ್ಣಯ ಕೈಗೊಂಡಿರುವ ಬಗ್ಗೆ ಬಲವಾದ ಆರೋಪ ವರ್ತಕರಿಂದ ಕೇಳಿಬರುತ್ತಿದೆ.