ಗ್ರಾಮ ಪಂಚಾಯ್ತಿ ಸದಸ್ಯರುಗಳ ಮಹಾ ಒಕ್ಕೂಟದಿಂದ ಬೆಂಗಳೂರಿನಲ್ಲಿ ನಾಳೆ ಧರಣಿ

ದಾವಣಗೆರೆ, ಫೆ. 6- ವಿವಿಧ ಬೇಡಿಕೆಗಳನ್ನು ಈಡರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರುಗಳ ಮಹಾ ಒಕ್ಕೂಟದ ವತಿಯಿಂದ ನಾಡಿದ್ದು ದಿನಾಂಕ 8 ರಂದು ಬೆಳಿಗ್ಗೆ 10.30 ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ದೊಗ್ಗಳ್ಳಿ ವೀರೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದಾವಣಗೆರೆ ಜಿಲ್ಲೆಯಿಂದ 1500 ಗ್ರಾಮ ಪಂಚಾಯತ್ ಸದಸ್ಯರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ತೆರಳಲಿದ್ದಾರೆ. ಭಾರತದ ಸಂವಿಧಾನದಲ್ಲಿ ಗ್ರಾಮ ಪಂಚಾಯತ್‌ ಗಳು ಸ್ವಯಂ ಆಡಳಿತ ಘಟಕಗಳಾಗಿ, ಅವುಗಳು ಕೆಲಸ ಮಾಡುವುದಕ್ಕೆ ಅವಶ್ಯಕವಾಗಬಹುದಾದ ಅಧಿಕಾರಗಳನ್ನು ಮತ್ತು ಪ್ರಾಧಿಕಾರಗಳನ್ನು ಅವುಗಳಿಗೆ ಕೊಡತಕ್ಕದ್ದು ಎಂದು ಹೇಳಲಾಗಿದೆ. ಆದರೆ ಸರ್ಕಾರಗಳು ಅದರಂತೆ ನಡೆದುಕೊಳ್ಳುತ್ತಿಲ್ಲ ಎಂದು ದೂರಿದರು.

1992 ರಲ್ಲಿ ಸಂವಿಧಾನದ 73 ಮತ್ತು 74 ನೇ ತಿದ್ದುಪಡಿಗಳ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಳನ್ನು ಸಂವಿಧಾನಬದ್ಧಗೊಳಿಸುವ ತನಕ ದೇಶದ ಬಹುತೇಕ ರಾಜ್ಯಗಳಲ್ಲಿ ಗ್ರಾಮ ಪಂಚಾಯತಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ತಿದ್ಡುಪಡಿಯಾದ  ಮೇಲೆ ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿದೆ. 40 ಮತ್ತು 243 ಜಿೇ ರ ಅನ್ವಯ ಗ್ರಾಮ ಪಂಚಾಯತಿಗಳು ಸ್ವಯಂ ಸರ್ಕಾರಗಳಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರೂ ಸಹ, ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜವಾಬ್ದಾರಿ ನಕ್ಷೆ, ಗ್ರಾಮಸಭೆ, ಬಾಪೂಜಿ ಸೇವಾ ಕೇಂದ್ರ, ಅಧಿಕಾರ ವಿಕೇಂದ್ರೀಕರಣ ಕಾಯ್ದೆ, ಕಚೇರಿ ನಿರ್ವಹಣಾ ಕೈಪಿಡಿ, ಸ್ಥಾಯಿ ಸಮಿತಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಲು ನಿಯಮ ರೂಪಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಧರಣಿ ನಡೆಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವೀರೇಶ್, ಚೇತನ್, ಮೌಲಾನಾಯ್ಕ ಉಪಸ್ಥಿತರಿದ್ದರು.

error: Content is protected !!