ಬಗರ್ ಹುಕ್ಕುಂ ಜಮೀನು ಸಕ್ರಮ ಅರ್ಜಿ ರೈತರೊಂದಿಗೆ ಚರ್ಚಿಸಿ ಕ್ರಮಕ್ಕೆ ಆಗ್ರಹ

ದಾವಣಗೆರೆ, ಫೆ.4- ಬಗರ್ ಹುಕ್ಕುಂ ಜಮೀನು ಸಕ್ರಮಕ್ಕೆ ಸಲ್ಲಿಸಿದ ಅರ್ಜಿಗಳನ್ನು  ಅಧಿಕಾರಿಗಳು ತಮ್ಮ ಹಂತದಲ್ಲಿಯೇ ಸ್ವಯಂ ಆಗಿ ತಿರಸ್ಕೃತಗೊಳಿಸಬಾರದು. ಸಂಬಂಧಿತ ರೈತರೊಂದಿಗೆ ಚರ್ಚಿಸಿಯೇ ಕ್ರಮವಹಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ (ಪುಟ್ಟಣ್ಣಯ್ಯ ಬಣ) ಕಾರ್ಯಾಧ್ಯಕ್ಷ  ವೀರಸಂಗಯ್ಯ ಒತ್ತಾಯಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ತಹಶೀಲ್ದಾರರು ಬಗರ್ ಹುಕ್ಕುಂ ಸಾಗುವಳಿ ಅರ್ಜಿಯನ್ನು ಸ್ವಯಂ ಆಗಿ ತಿರಸ್ಕರಿಸುತ್ತಿದ್ದಾರೆ. ಗ್ರಾಮ ಲೆಕ್ಕಾಧಿಕಾರಿಯಾಗಲೀ, ಯಾವುದೇ ಅಧಿಕಾರಿಯಾಗಲೀ ಸ್ಥಳ ಭೇಟಿ ಮಾಡದೇ ಕಚೇರಿಯಲ್ಲಿಯೇ ಕುಳಿತು ಅರ್ಜಿಗಳನ್ನು ತಿರಸ್ಕರಿಸುತ್ತಿದ್ದಾರೆ. ಇದರಿಂದ ಬಹಷ್ಟು ರೈತರಿಗೆ ಅನ್ಯಾಯವಾಗುತ್ತಿದ್ದು,  ತಹಶೀಲ್ದಾರರು ಅರ್ಜಿ ತಿರಸ್ಕರಿಸುವ ಮುನ್ನ ಸಂಬಂಧಿತ ರೈತನ ಅಭಿಪ್ರಾಯವನ್ನೂ ಪಡೆದುಕೊಳ್ಳಬೇಕು. ಈ ಕುರಿತು ಸರ್ಕಾರ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ದಾವಣಗೆರೆ ತಾಲ್ಲೂಕಿನ ಹಾಲುವರ್ತಿಯಲ್ಲಿ  25 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದ ಜಮೀನನ್ನು ದಾವಣಗೆರೆಯ ಹಿಂದಿನ ಜಿಲ್ಲಾಧಿಕಾರಿ ಖಾಸಗಿ ಕೈಗಾರಿಕೆಯೊಂದಕ್ಕೆ ಗುತ್ತಿಗೆ ಕೊಟ್ಟಿದ್ದಾರೆ. ರೈತರ ಬೆಳೆ ಹಾಗೂ ಅವರು ಅಲ್ಲಿಯೇ ವಾಸವಿದ್ದ ಮನೆಯನ್ನೂ ಕೆಡವಿ ದೌರ್ಜನ್ಯ ಎಸಗಿದ್ದಾರೆ. ರೈತ ಮಹಿಳೆಗಾದ ಅನ್ಯಾಯ ಸರಿಪಡಿಸಲು ಅಧಿಕಾರಿಗಳಿಗೆ ಮನವಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಮತ್ತೆ ಹೊಸದಾಗಿ ಬಂದಿರುವ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗುತ್ತಿದ್ದು, ಈ ಪ್ರಕರಣದ ಬಗ್ಗೆ ಕಂದಾಯ ಸಚಿವರ ಗಮನವನ್ನೂ ಸೆಳೆಯಲಾಗುವುದು ಎಂದರು.

ರೈತ ಮುಖಂಡ ಪ್ರೊ. ನಂಜುಂಡಸ್ವಾಮಿ ಸ್ಮರಣೆ ಕಾರ್ಯಕ್ರಮ ಸಂಘಟಿಸುತ್ತಿದ್ದು, ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಯವರನ್ನೂ ಆಹ್ವಾನಿಸಲಾಗಿದೆ. ಈ ಸಂದರ್ಭದಲ್ಲಿ ರಾಜ್ಯ ಬಜೆಟ್‌ನಲ್ಲಿ ರೈತಪರ ಅಂಶಗಳನ್ನು ಸೇರಿಸಲು ಒತ್ತಾಯಿಸಲಾಗುವುದು ಎಂದರು.

ರೈತ ಸಂಘಟನೆಯ ಪ್ರಮುಖರಾದ ಕರಿಲಕ್ಕೇನಹಳ್ಳಿ ರೇವಣಸಿದ್ದಪ್ಪ, ಅರುಣಕುಮಾರ್ ಕುರುಡಿ, ಎಸ್.ರಾಜಪ್ಪ, ಬುಳ್ಳಾಪುರದ ಹನುಮಂತಪ್ಪ, ಎಸ್.ಟಿ.ಪರಮೇಶ್ವರಪ್ಪ, ಹಾಲಮ್ಮ ಹಾಲುವರ್ತಿ, ನಾಗಪ್ಪ, ತಿಪ್ಪಣ್ಣ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

error: Content is protected !!