ಸೊರಗಿದ ಸಂಜೀವಿನಿ – ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್

ಸೊರಗಿದ ಸಂಜೀವಿನಿ – ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್

ನಮ್ಮ ದೇಶದ ಬೆನ್ನೆಲುಬು ರೈತನೆಂಬುದು ವಾಡಿಕೆ. ಆದರೆ, ರೈತನ ಭಾಗಿದ ಬೆನ್ನನ್ನು ನೇರಗೊಳಿಸಿ ಸೆಟೆದು ನಿಲ್ಲುವಂತೆ ಮಾಡಬೇಕೆಂಬುದು ರೈತ ಸಮುದಾಯದ ಬೇಡಿಕೆ. ಸ್ವಾತಂತ್ರ ಬಂದಾಗಿನಿಂದ ರೈತರ ಏಳಿಗೆಯ ಹೇಳಿಕೆಗಳನ್ನು ನೀಡುತ್ತಿರುವ ಸರ್ಕಾರಗಳು ಸಫಲವಾಗಿದ್ದು, ಅಲ್ಪ ಮಾತ್ರ. 

ರೈತ ಬಾಂಧವರು ಉತ್ಸಾಹದಿಂದ ತಮ್ಮ ಶಕ್ತಿ ಮೀರಿ ಹೊಲಗದ್ದೆಗಳಲ್ಲಿ ದುಡಿದು ತಮ್ಮ ಅನ್ನದ ಅವಶ್ಯಕತೆ ನೀಗಿಸಿಕೊಳ್ಳುವುದರ ಜೊತೆ ಇಡೀ ದೇಶದ ಜನತೆಗೆ ಅನ್ನದಾತರಾಗಿ, ಹೊರದೇಶದವರ ಹಸಿವನ್ನೂ ನೀಗಿಸುತ್ತಾ ನಿರಂತರ ತಮ್ಮ ಕರ್ತವ್ಯ ನಿಭಾಯಿಸುತ್ತಿ ರುವುದು ಅತ್ಯಂತ ಪ್ರಶಂಸನೀಯ ವಿಚಾರ. ಇಂತಹ ರೈತ ಬಾಂಧವರ ಏಳಿಗೆ ಹಾಗೂ ಬೆಳವಣಿಗೆಗೆ ಪೂರಕ ವಾಗುವಂತೆ, ಒಕ್ಕಲುತನ ಹುಟ್ಟುವಳಿಗಳ ಇಳುವರಿ ಹೆಚ್ಚಿಸಲು, ಒಕ್ಕಲುತನ ಕ್ರಿಯೆ ಸುಲಭವಾಗಿಸಲು, ಯಂತ್ರೋಪಕರಣಗಳ ಖರೀದಿಸಲು ಹಾಗೂ ಆಗಿಂದಾಗ್ಗೆ ಕೃಷಿ ಕ್ಷೇತ್ರದಲ್ಲಿ ಆಗುವ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳಲು ಅನುಕೂಲವಾಗುವಂತೆ ಅವರಿಗೆ ಆರ್ಥಿಕ ಸಹಾಯ ನೀಡಲು ಸಹಕಾರಿ ಕ್ಷೇತ್ರದಡಿಯಲ್ಲಿ ಪ್ರತಿ ಜಿಲ್ಲೆಯಲ್ಲೂ ಸ್ಥಾಪನೆಗೊಂಡಿರುವ  ಸಂಸ್ಥೆಗಳೇ `ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕು’ಗಳು. 

ನಮ್ಮ ರಾಜ್ಯದಲ್ಲಿ ಬಹುತೇಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಆಯಾ ಜಿಲ್ಲೆಯ ರೈತರನ್ನು ಸದೃಢವಾಗಿಸುವುದರ ಜೊತೆಗೆ ಬ್ಯಾಂಕುಗಳೂ ಸದೃಢವಾಗಿ ಬೆಳದಿವೆ. ಆದರೆ, ಕೆಲವು ಜಿಲ್ಲೆಗಳಲ್ಲಿ ಬ್ಯಾಂಕುಗಳು ತಮ್ಮ ಅಸ್ತಿತ್ವ ಉಳಿಸಿಕೊಂಡಿರುವುದೇ ಒಂದು ಸಾಧನೆ ಆದಂತಾಗಿದೆ. ಆ ವರ್ಗದಲ್ಲಿ ನಮ್ಮ ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಕೂಡ ಒಂದಾಗಿದೆ.

2001ರಲ್ಲಿ ಚಿತ್ರದುರ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ಬೇರ್ಪಟ್ಟು ಸ್ವತಂತ್ರವಾಗಿ ಅಂದಿನ ಮತ್ತು ಇಂದಿನ ಜಿಲ್ಲಾ ಮಂತ್ರಿಗಳಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ಸ್ಥಾಪನೆಯಾದ ಬ್ಯಾಂಕ್ ತೆವಳುವ ಅವಸ್ಥೆಯಿಂದ ಅಂಬೆಗಾಲಿಡುವ ಮಟ್ಟಕ್ಕೆ ಬಂದು, ನಿಂತು, ನಡೆಯಲಾರದೆ ಅಂಬೆಗಾಲಿಡುತ್ತಲೇ ಸಾಗುತ್ತಿರುವುದು ವಾಸ್ತವ ಸಂಗತಿ.

ಬಳಲಿ ಬೆಂಡಾಗಿರುವ ಸಣ್ಣ, ಅತಿ ಸಣ್ಣ ರೈತ ಸಮುದಾಯಕ್ಕೆ ಆರ್ಥಿಕ ಸಂಪನ್ಮೂಲ ಒದಗಿಸಿ, ಅವರ ಬಾಳಿನಲ್ಲಿ ನವ ಚೈತನ್ಯ ಮೂಡಿಸಿ, ಸಂಜೀವಿನಿಯಾಗಬೇಕಾದ ಬ್ಯಾಂಕ್ ತಾನೇ ಸೋತು, ಸೊರಗಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು  ಹೆಣಗಾಡುವ ಪರಿಸ್ಥಿತಿ ತಲುಪಿರುವುದು ವಿಪರ್ಯಾಸ. ಜಿಲ್ಲೆಯ ಎಲ್ಲಾ ಸಹಕಾರಿ ಸಂಸ್ಥೆಗಳಿಗೆ ಮಾತೃ ಸಂಸ್ಥೆಯಾಗಿ ಮಾರ್ಗ ದರ್ಶನ ಮಾಡಬೇಕಾದ ಸಂಸ್ಥೆಯೇ ಪ್ರಗತಿದಾಯಕ ವಲ್ಲದ ಸ್ಥಿತಿಯಲ್ಲಿ ಇರುವುದು ಖೇದದ ಸಂಗತಿ.

ಯಾವುದೇ ಒಂದು ಸಂಸ್ಥೆಯು ಸದೃಢವಾಗಿ ಇರಬೇಕೆಂದರೆ ಅದರ ಆಡಳಿತದ ಚುಕ್ಕಾಣಿ ಹಿಡಿದ ಆಡಳಿತ ಮಂಡಳಿಯ ಧ್ಯೇಯ, ಧೋರಣೆಗಳು ಉದಾತ್ತವಾಗಿದ್ದು, ಸಂಸ್ಥೆಯ ಹಾಗೂ ಸದಸ್ಯರ ಅಭಿವೃದ್ಧಿಗೆ ಪೂರಕವಾಗುವಂತ ತೀರ್ಮಾನಗಳು ಆಗಬೇಕು. ವ್ಯತಿರಿಕ್ತವಾಗಿ ತಮ್ಮ ಸ್ವಾರ್ಥ ಸಾಧನೆಗೆ ಪೂರಕವಾಗುವಂತಹ ತೀರ್ಮಾನಗಳಾದಲ್ಲಿ ಖಂಡಿತವಾಗಿಯೂ  ಖಂಡನೀಯ. ನಮ್ಮ ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಲ್ಲಿ ಆದಾಯ ಮೂಲಗಳಿಗಿಂತ ಖರ್ಚಿನ ಬಾಬ್ತುಗಳೇ ಹೆಚ್ಚಾಗಿದ್ದು, ಅನಾವಶ್ಯ ಬ್ರಾಂಚ್‌ಗಳ ಸ್ಥಾಪನೆ, ಸಿಬ್ಬಂದಿಗಳ ನೇಮಕ, ಅತಿಯಾದ ಆಡಳಿತಾತ್ಮಕ ವೆಚ್ಚಗಳು, ಉಪಕರಣಗಳ ಖರೀದಿಯಲ್ಲಿ ಮೋಸ, ವಂಚನೆ ಇನ್ನೂ ಹತ್ತು ಹಲವಾರು ತಪ್ಪು ತೀರ್ಮಾನಗಳು ಹಾಗೂ ಸ್ವಾರ್ಥಕ್ಕೆ ಅನುಕೂಲವಾಗುವ  ತೀರ್ಮಾನಗಳು ಬ್ಯಾಂಕನ್ನು ಅಂಬೆಗಾಲಿಡುವ ಅವಸ್ಥೆಯಲ್ಲಿಯೇ ಉಳಿಸಿವೆ. ಇದೇ ಮನಸ್ಥಿತಿಯ ಆಡಳಿತ ಮಂಡಳಿ ಆಯ್ಕೆಯಾದಲ್ಲಿ ಬ್ಯಾಂಕಿನ 180 ಮಂದಿ ಸಿಬ್ಬಂದಿ ಬೀದಿಗೆ ಬರುವುದರಲ್ಲಿ ಹಾಗೂ ಜಿಲ್ಲೆಯ ಲಕ್ಷಾಂತರ ಮಂದಿ ಸಣ್ಣ ರೈತರು ಸಂಕಷ್ಟಕ್ಕೆ ಸಿಲುಕುವುದರಲ್ಲಿ ಸಂದೇಹವಿಲ್ಲ.

ಇದೇ ಜನವರಿ 25 ರಂದು ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿಗೆ ಚುನಾವಣೆ ನಡೆಯುತ್ತಿದ್ದು, ಜಿಲ್ಲೆಯ ವಿವಿಧ ಸಹಕಾರಿ ಸಂಸ್ಥೆಗಳ ಪ್ರತಿನಿಧಿಗಳು ಅದರಲ್ಲೂ ಜಿಲ್ಲೆಯ ರೈತ ಪ್ರತಿನಿಧಿಗಳು ಸಚ್ಚಾರಿತ್ರ ಹೊಂದಿದ ಹಾಗೂ ರೈತರ ಏಳಿಗೆ ಮತ್ತು ಸಂಸ್ಥೆಯ ಅಭಿವೃದ್ಧಿಯ ಕಾಳಜಿ ಹೊಂದಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ರೈತರ ಬಾಳಿನ ಸಂಜೀವಿನಿ ಯಾದ ಬ್ಯಾಂಕನ್ನು ಉಳಿಸಿ ಬೆಳೆಸಬೇಕಾಗಿದೆ.

– ಐಗೂರು ಸಿ.ಚಂದ್ರಶೇಖರ್, ಮಾಜಿ ನಿರ್ದೇಶಕರು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ದಾವಣಗೆರೆ

error: Content is protected !!