ಮಾಯಕೊಂಡ, ಜ. 18 – ಪಡಿತರ ಅಕ್ಕಿಯಲ್ಲಿ ಮೌಲ್ಯವರ್ಧನೆಗಾಗಿ ಸಾರ ವರ್ಧಿತ ಅಕ್ಕಿ ಬೆರಸಲಾಗಿದ್ದು, ನಾಗರಿಕರಿಗೆ ಯಾವುದೇ ಆತಂಕ ಬೇಡ ಎಂದು ಆಹಾರ ನಿರೀಕ್ಷಕ ಜೆ. ನಾಗೇಂದ್ರ ಮಾಹಿತಿ ನೀಡಿದರು.
ಸಮೀಪದ ಕೈದಾಳ್‌ನ ಕ್ಯಾಂಪ್‌ನಲ್ಲಿ ನಡೆದ ಆಹಾರ ಅದಾಲತ್ ಉದ್ಘಾಟಿಸಿ ಅವರು ಮಾತನಾಡಿದರು.
ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಬೆರೆಸಲಾಗಿದೆ ಎಂದು ಕೆಲವರು ತಪ್ಪು ಸಂದೇಶ ಹರಡುತ್ತಿದ್ದಾರೆ. ಪ್ಲಾಸ್ಟಿಕ್ ಅಕ್ಕಿ ಬೆರೆಸುವ ಯಾವುದೇ ಪ್ರಶ್ನೆಯೇ ಇಲ್ಲ.
ಪೌಷ್ಟಿಕಾಂಶ ಹೆಚ್ಚಿಸಲು ಪ್ರತಿ ಕ್ವಿಂಟಾಲ್ ಅಕ್ಕಿಗೆ ಒಂದು ಕೆಜಿಯಂತೆ ಸಾರವರ್ಧಿತ ಅಕ್ಕಿ ಮಿಶ್ರಣ ಮಾಡಲಾಗುತ್ತದೆ. ಮಧ್ಯಮ ವರ್ಗದ ಜನರಲ್ಲಿ ಪೌಷ್ಟಿಕಾಂಶ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಈ ಬಗ್ಗೆ ಯಾವುದೇ ಸಂಶಯ ಬೇಡ ಎಂದು ಅವರು ಭರವಸೆ ನೀಡಿದರು.
ಗ್ರಾಹಕನಿಗೆ ಯಾವುದೇ ಖರೀದಿಯಲ್ಲಿ ಲೋಪ ಅಥವಾ ಅನ್ಯಾಯವಾದರೆ ಗ್ರಾಹಕರ ವೇದಿಕೆಗೆ ದೂರು ನೀಡುವ ಹಕ್ಕನ್ನು ಹೊಂದಿರುತ್ತಾರೆ ಎಂದು ಮಾಹಿತಿ ನೀಡಿದರು.
ಸರ್ಕಾರ ಪ್ರತಿ ಕೆಜಿಗೆ ಅಕ್ಕಿ 34 ರಂತೆ 170 ನೇರ ನಗದು ನೀಡುತ್ತಿದ್ದು ಸಾರ್ವಜನಿಕರ ಸದ್ಭಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಕೈದಾಳ್ ಗ್ರಾಮ ಪಂಚಾಯತಿ ಸದಸ್ಯೆ ಅಶ್ವಿನಿ, ಕಾರ್ಯದರ್ಶಿ ರೇವಣಸಿದ್ದನಗೌಡ, ನ್ಯಾಯಬೆಲೆ ಅಂಗಡಿ ಮಾಲೀಕರಾದ ಮೌನೇಶ್, ಉಮೇಶ್ ಗ್ರಾಹಕರು ಮತ್ತು ಗ್ರಾಮಸ್ಥರು ಇದ್ದರು.