ದಾವಣಗೆರೆ, ಜ.16- ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದಿಂದ ವಿವಿಧ ಕೋರ್ಸುಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ವಿವಿಯ ಸಹಾಯಕ ಪ್ರಾದೇಶಿಕ ನಿರ್ದೇಶಕ ಡಾ.ಷಣ್ಮುಗಂ ಹೇಳಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಪ್ಲೋಮಾ, ಪಿ.ಜಿ. ಡಿಪ್ಲೋಮಾ, ಪದವಿ ಹಾಗೂ ಸ್ನಾತಕೋತ್ತರ ಪದವಿಗಾಗಿ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಎಂಬಿಎಗೆ ಪ್ರವೇಶ ಪರೀಕ್ಷೆ ಇಲ್ಲದೇ ನೇರ ಪ್ರವೇಶ ನೀಡಲಾಗುವುದು.
ಎಸ್ಸಿ/ಎಸ್ಟಿ ಜನಾಂಗಕ್ಕೆ ಪ್ರವೇಶ ಶುಲ್ಕ ಉಚಿತವಿದೆ. ಒಬಿಸಿ ಹಾಗೂ ವಿಕಲಾಂಗ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಶುಲ್ಕ ಮರುಪಾವತಿ ಸೌಲಭ್ಯವಿದ್ದು, ವಿದ್ಯಾರ್ಥಿಗಳು, ಗೃಹಿಣಿಯರು, ನೌಕರರು, ಶಿಕ್ಷಣ ಅರ್ಧಕ್ಕೆ ಸ್ಥಗಿತಗೊಳಿಸಿದವರು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಅವರು ಕರೆ ನೀಡಿದರು. ಕಲಿಕಾಸಕ್ತಿಯುಳ್ಳವರಿಗಾಗಿ 230 ವಿವಿಧ ಕೋರ್ಸುಗಳು ಲಭ್ಯವಿವೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಗನುಸಾರ ನಾಲ್ಕು ವರ್ಷಗಳ ಪದವಿ ಮಾಡಬಹುದಾಗಿದ್ದು, ಇದೇ ಆಸಕ್ತಿ ಇರುವ ಬೇರೆ ವಿಷಯಗಳನ್ನೂ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.
ಆಸಕ್ತರು https://ignouadmission.samarth.edu.inಗೆ ಭೇಟಿ ನೀಡಿ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಜನವರಿ 31ರೊಳಗೆ ಅರ್ಜಿ ಸಲ್ಲಿಸಹುದಾಗಿದೆ. ವಿವರಗಳಿಗೆ ವಾಟ್ಸಾಪ್ ಸಂಖ್ಯೆ 9449337272 ಅಥವಾ 080-29607272ಕ್ಕೆ ಕರೆ ಮಾಡಬಹುದು. ಹಾಗೂ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ ದಲ್ಲಿನ ಅಧ್ಯಯನ ಕೇಂದ್ರಕ್ಕೆ ಭೇಟಿ ನೀಡಬಹುದಾಗಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಯೋಜಕ ಡಾ.ಅಶೋಕ್ ಉಪಸ್ಥಿತರಿದ್ದರು.