ದಾವಣಗೆರೆ, ಜ.17- ಕೇಂದ್ರ ಸರ್ಕಾರ ಇತ್ತೀಚೆಗೆ ಪ್ರಸ್ತಾಪಿಸಿರುವ ಐಪಿಸಿ 106 ಕ್ಲಾಸ್ 2 ವಾಹನ ಕಾಯ್ದೆ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿ ನಾಳೆ ಬುಧವಾರ ನಡೆಸುವ ಹೋರಾಟವನ್ನು ಬೆಂಬಲಿಸುವುದಿಲ್ಲ ಎಂದು ಜಿಲ್ಲಾ ಲಾರಿ ಮಾಲೀಕರು ಮತ್ತು ಟ್ರಾನ್ಸ್ ಫೋರ್ಟ್ ಏಜೆಂಟರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ಹೇಳಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಕೇಂದ್ರ ಗೃಹ ಸಚಿವಾಲಯವು ಐಪಿಸಿ ಸೆಕ್ಷನ್ 304ಎ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಅತಿ ವೇಗ ಹಾಗೂ ಅಜಾಗರೂಕತೆಗೆ ಕಾನೂನಿನಲ್ಲಿ ಪರಿವರ್ತನೆ ಮಾಡಿ 7 ಲಕ್ಷ ರೂ. ದಂಡ ಹಾಗೂ 10 ವರ್ಷ ಜೈಲು ಶಿಕ್ಷೆ (ಜಾಮೀನು ರಹಿತ) ಮಾಡಿರುವುದು ಖಂಡನೀಯ.
ಈ ನೂತನ ಕಾನೂನು ಎಲ್ಲಾ ವಾಹನ ಚಾಲಕರಿಗೂ ಮಾರಕವಾಗಿದ್ದು, ಇದರ ಗಂಭೀರತೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಎಐಎಂಟಿಸಿ ಮೂಲಕ ಮನವರಿಕೆ ಮಾಡಿಕೊಡಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ನಮ್ಮ ಸಂಘಟನೆಯನ್ನು ಸಂಪರ್ಕಿಸಿ ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರಿಗೆ ವಿವರಣೆ ಪಡೆಯಲು ಸೂಚಿಸಿದ್ದರು. ನಂತರ ಗೃಹ ಕಾರ್ಯದರ್ಶಿ ಅಜಯ್ ಬಲ್ಲಾ ಅವರು ನಮ್ಮ ಸಂಘಟನೆಯೊಂದಿಗೆ ಚರ್ಚಿಸಿ ಮಾರ್ಪಡಿಸಲಾಗಿರುವ ಕಾನೂನನ್ನು ಜಾರಿಗೊಳಿಸುವುದಿಲ್ಲ ಎಂದು ಲಿಖಿತವಾಗಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಕಾನೂನು ಬದಲಿಸಿರುವುದನ್ನು ಖಂಡಿಸಿ ಇದೇ 17ರಂದು ಫೆಡರೇಷನ್ ಆಫ್ ಕರ್ನಾಟಕ ಲಾರಿ ಮಾಲೀಕರ ಅಸೋಸಿಯೇಷನ್ ಕರೆ ಕೊಟ್ಟಿರುವ ಮುಷ್ಕರದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದವರು ಸ್ಪಷ್ಟಪಡಿಸಿದರು.
ಈ ಕಾನೂನು ಪಾರ್ಲಿಮೆಂಟ್‌ನಿಂದ ರಾಜ್ಯ ಸಭಾ ಹಾಗೂ ರಾಷ್ಟ್ರಪತಿಗಳ ಒಪ್ಪಿಗೆ ಕೊಟ್ಟ ನಂತರ ಮುಂದಿನ ಅಧಿವೇಶನದಲ್ಲಿ ಚರ್ಚಿಸಿ ಹಿಂಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್.ಕೆ. ಮಲ್ಲಿಕಾರ್ಜುನ್, ವಿಜಯಕುಮಾರ್, ಮಹಾಂತೇಶ್ ಒಣರೊಟ್ಟಿ, ಎಂ.ದಾದಾಪೀರ್, ಶ್ರೀಧರ್ ಬಾತಿ, ಭೀಮಣ್ಣ, ಫಯಾಜ್ ಅಹ್ಮದ್, ರಫೀಕ್, ಸರ್ದಾರ್ ಅಲಿಖಾನ್ ಉಪಸ್ಥಿತರಿದ್ದರು.