ರಾಯಣ್ಣನ ಪ್ರತಿಮೆ ತೆರವುಗೊಳಿಸಲು ಡಿಸಿ ಗಡುವು

ಮಲೇಬೆನ್ನೂರು, ಜ.11- ಭಾನುವಳ್ಳಿ ಗ್ರಾಮದ ವಾಲ್ಮೀಕಿ ವೃತ್ತದ ಪಕ್ಕದಲ್ಲೇ ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪಿಸಿದ ಹಿನ್ನೆಲೆಯಲ್ಲಿ ಉಂಟಾಗಿರುವ ಸಮಸ್ಯೆ ಕುರಿತು ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ಅವರು ಗುರುವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಹಾಗೂ ಭಾನುವಳ್ಳಿ ಗ್ರಾಮದ ಎರಡೂ ಸಮಾಜದ ಪ್ರಮುಖರ ಸಭೆ ನಡೆಸಿದರು ಎಂದು ತಿಳಿದು ಬಂದಿದೆ.

ಸಭೆಯಲ್ಲಿ ಗ್ರಾಮದ ಬಾಗಜ್ಜಿ ಚಂದ್ರಪ್ಪ, ಹೆಚ್.ಕೆ.ಕನ್ನಪ್ಪ, ಜೆ.ಗುತ್ತ್ಯೆಪ್ಪ, ಹೆಚ್.ಎಸ್.ಕರಿಯಪ್ಪ, ಹಣಚಿಕ್ಕಿ ರೇವಣಸಿದ್ದಪ್ಪ, ಬಲ್ಲೂರು ಕೆಂಚಪ್ಪ, ಪೂಜಾರ್ ಬೀರಪ್ಪ, ಡಿ.ಕೆ.ಪಾಲಾಕ್ಷಿ ಮತ್ತಿತರರು ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪಿಸಿರುವುದನ್ನು ಸಮರ್ಥಿಸಿಕೊಂಡು, ಪ್ರತಿಮೆಯನ್ನು ಅಲ್ಲಿಯೇ ಉಳಿಸಿ ಎಂದರು.

ಗ್ರಾ.ಪಂ. ಸದಸ್ಯರಾದ ಟಿ.ಪಿ.ಧನ್ಯಕುಮಾರ್, ಶಿವು ಬೆಳಕೊಂಡರ, ಶ್ರೀಮತಿ ಗಿರಿಜಮ್ಮ ಜಯ್ಯಪ್ಪ ಮತ್ತಿತರರು ಮಾತನಾಡಿ, ಪ್ರತಿಮೆಯನ್ನು ತೆರವು ಗೊಳಿಸುವವರಿಗೂ ಧರಣಿ ಮುಂದುವರಿಸುವುದಾಗಿ ಹೇಳಿದರು.

ಗ್ರಾ.ಪಂ. ಅಧ್ಯಕ್ಷ ಮಹೇಶ್ ಪಟೇಲ್ ಮಾತನಾಡಿ, ಪ್ರತಿಮೆ ಪ್ರತಿಷ್ಠಾಪನೆಗಾಗಿ ಪ್ರತಿಷ್ಠೆ ತೆಗೆದುಕೊಳ್ಳುವ ಬದಲು, ಗ್ರಾಮದಲ್ಲಿ ನೆನೆಗುದಿಗೆ ಬಿದ್ದಿರುವ ಆಸ್ಪತ್ರೆ ಸಮಸ್ಯೆಯ ಪರಿಹಾರಕ್ಕೆ ಹೋರಾಟ ಮಾಡಿದ್ದರೆ ಗ್ರಾಮದ ಎಲ್ಲಾ ಜನರಿಗೆ ಒಳ್ಳೆಯದಾಗುತ್ತಿತ್ತು ಎಂದಾಗ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಅವರು, ನೀವು ಯಾವ ಇಲಾಖೆ ಅನುಮತಿ ಪಡೆದು ನಿಮ್ಮ ಜಾಗದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಇಟ್ಟೀದ್ದೀರಿ ಎಂದು ಜಾಗದ ಮಾಲೀಕ ಕೆಂಚಪ್ಪ ಮಾದಾಪುರ ಅವರನ್ನು ಪ್ರಶ್ನಿಸಿದರು. ಆಗ ಜಾಗದ ಮಾಲೀಕರ ಬಳಿ ಸರಿಯಾದ ಉತ್ತರ ಇರಲಿಲ್ಲ.  ರಸ್ತೆಯ ಮಧ್ಯಭಾಗದಿಂದ 21 ಮೀಟರ್ ಜಾಗ ಬಿಟ್ಟು ಮತ್ತು ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆದು ಪ್ರತಿಮೆಗಳನ್ನು ಪ್ರತಿಷ್ಠಾಪಿಸಬೇಕು. ಇದ್ಯಾವುದನ್ನು ನೀವು ಮಾಡದಿರುವ ಕಾರಣ ಕೂಡಲೇ ಪ್ರತಿಮೆಯನ್ನು ತೆರವುಗೊಳಿಸಿ ಎಂದು ಪ್ರತಿಮೆ ಇಟ್ಟವರಿಗೆ ಹೇಳಿದರು. ಅಲ್ಲದೇ, ಪಿಡಿಓ ಬೀರೇಶ್ ಕೂಡಾ ಪ್ರತಿಮೆ ಪ್ರತಿಷ್ಠಾಪಿಸಲು ಗ್ರಾ.ಪಂ. ನಿಂದ ಅನುಮತಿ ಕೊಟ್ಟಿಲ್ಲ ಎಂದರು. ಆಗ ಮಧ್ಯ ಪ್ರವೇಶಿಸಿದ ಕುರುಬ ಸಮಾಜದ ಮುಖಂಡರು, ತಕ್ಷಣ ಪ್ರತಿಮೆ ತೆರವು ಮಾಡುವುದರಿಂದ ಯುವಕರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಸ್ವಲ್ಪ ಸಮಾಯಾವಕಾಶ ಕೊಡಿ, ಅವರಿಗೆ ವಿಷಯ ಮನವರಿಕೆ ಮಾಡಿಕೊಟ್ಟು ಪ್ರತಿಮೆಯನ್ನು ತೆರವು ಮಾಡಲು ಪ್ರಯತ್ನಿಸುತ್ತೇವೆಂದು ಮನವಿ ಮಾಡಿದರು.

ಇದಕ್ಕೆ ಸಮ್ಮತಿ ನೀಡಿದ ಜಿಲ್ಲಾಧಿಕಾರಿಗಳು, ಇನ್ನು 10 ದಿನಗಳ ಒಳಗಾಗಿ ಪ್ರತಿಮೆಯನ್ನು ಯಾವುದೇ ಸಮಸ್ಯೆ ಆಗದಂತೆ ತೆರವು ಮಾಡಿಸುವ ಜವಾಬ್ದಾರಿ ನಿಮ್ಮದೆಂದು ಸಮಾಜದ ಮುಖಂಡರಿಗೆ ಹೇಳಿದರು.

ಬೇರೆ ಕಡೆ ಜಾಗ ನೋಡಿ, ಅಲ್ಲಿ ಯಾವ ಸಮಸ್ಯೆ ಇಲ್ಲ ಎಂದಾದರೆ ಅಲ್ಲಿಯೇ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಅನುಮತಿ ಪಡೆಯಿರಿ ಎಂದು ಜಿಲ್ಲಾಧಿಕಾರಿಗಳು ಮುಖಂಡರಿಗೆ ಹೇಳಿದ್ದಾರೆಂದು ಹೇಳಲಾಗಿದೆ.

ಅಪಾರ ಜಿಲ್ಲಾಧಿಕಾರಿ ಲೋಕೇಶ್, ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ವಿಜಯಕುಮಾರ್, ಡಿವೈಎಸ್ಪಿ ಬಸವರಾಜ್, ಸಿಪಿಐ ಸುರೇಶ್, ಪಿಎಸ್ಐ ಪ್ರಭು ಕೆಳಗಿನಮನೆ ಮತ್ತಿತರರು ಸಭೆಯಲಿದ್ದಾರೆ.

ಭಾನುವಳ್ಳಿ : 3ನೇ ದಿನಕ್ಕೆ ಕಾಲಿಟ್ಟ ಧರಣಿ

ಮಲೇಬೆನ್ನೂರು, ಜ.11- ಭಾನುವಳ್ಳಿ ಗ್ರಾಮದ ವಾಲ್ಮೀಕಿ ವೃತ್ತದ ಪಕ್ಕದಲ್ಲೇ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ರಾತ್ರೋರಾತ್ರಿ ಪ್ರತಿಷ್ಠಾಪಿಸಿರುವುದನ್ನು ಖಂಡಿಸಿ ವಾಲ್ಮೀಕಿ ವೃತ್ತದಲ್ಲಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ 3ನೇ ದಿನಕ್ಕೆ ಕಾಲಿಟ್ಟಿದೆ. ಧರಣಿ ಸ್ಥಳದಲ್ಲಿಯೇ ಊಟ, ಉಪಹಾರ ಮಾಡಿದ ಜನರು, ರಾತ್ರಿ ಅಲ್ಲಿಯೇ ಮಲಗುತ್ತಿದ್ದಾರೆ. ರಾಯಣ್ಣನ ಪ್ರತಿಮೆಯನ್ನು ತೆರವು ಮಾಡುವವರೆಗೂ ಧರಣಿ ಮುಂದುವರಿಸುವುದಾಗಿ ಪ್ರತಿಭಟನೆ ನಿರತರು ತಿಳಿಸಿದ್ದಾರೆ.

error: Content is protected !!