ನೌಕರರ ಬೇಡಿಕೆ ಈಡೇರಿಸದಿದ್ದರೆ ಹೋರಾಟ ಅನಿವಾರ್ಯ

ನೌಕರರ ಬೇಡಿಕೆ ಈಡೇರಿಸದಿದ್ದರೆ ಹೋರಾಟ ಅನಿವಾರ್ಯ

ದಾವಣಗೆರೆ, ಜ.11- 7ನೇ ವೇತನ ಆಯೋಗ  ಜಾರಿ ಮಾಡುವುದು ಸೇರಿದಂತೆ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಎಲ್ಲ ಶಾಸಕರು, ಸಚಿವರು, ಪರಿಷತ್ ಸದಸ್ಯರಿಗೆ ಮನವಿ ನೀಡಲು ನಿರ್ಧರಿಸಲಾಗಿದೆ. ಸರ್ಕಾರ ನಮ್ಮ ಬೇಡಿಕೆ ಈಡೇರಿಸು ತ್ತದೆ ಎಂಬ ಭರವಸೆ ಇದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಹೇಳಿದರು.

ಗುರುವಾರ ನಗರದ ಸರ್ಕಾರಿ ನೌಕರರ ಭವನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇದೇ ವರ್ಷದಲ್ಲಿ ಲೋಕಸಭಾ ಚುನಾವಣೆ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆಗಳು ಎದುರಾಗಲಿವೆ. ರಾಜ್ಯ ಬಜೆಟ್ ರೂಪುರೇಷಗಳೂ ತಯಾರಾಗಲಿವೆ. ಹೀಗಾಗಿ ನಮ್ಮ ಬೇಡಿಕೆಗಳ ಕುರಿತು ಎಲ್ಲಾ ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಶಾಸಕರುಗಳಿಗೆ ಮನವಿ ಸಲ್ಲಿಸುವ ಮೂಲಕ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಇದೇ 20ರೊಳಗೆ ಮನವಿ ಸಲ್ಲಿಸುವ ಕಾರ್ಯಕ್ರಮ ಮುಗಿಸಿ, ನಂತರ ರಾಜ್ಯದ 9 ಸಾವಿರ ಜನ ಪದಾಧಿಕಾರಿಗಳು ಸೇರಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಹಳೆ ಪಿಂಚಣಿ ಪದ್ಧತಿ ಮರುಜಾರಿ, ಉಚಿತ ಆರೋಗ್ಯ ಚಿಕಿತ್ಸೆ ಸೇರಿದಂತೆ ಹಲವು ಬೇಡಿಕೆಗಳಿವೆ. ಹಳೆ ಪಿಂಚಣಿ ಮರು ಜಾರಿ ಕುರಿತು ಸಿಎಂ ಈಗಾಗಲೇ ಭರವಸೆ ನೀಡಿದ್ದಾರೆ. ಒಂದು ವೇಳೆ ಈ ಬೇಡಿಕೆ ಈಡೇರದೆ ಹೋದರೆ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಹೇಳಿದರು.

ಸರ್ಕಾರಿ ನೌಕರರ ಸಂಘವು ಈ ಹಿಂದೆ ರಾಜ್ಯದಲ್ಲಿ ಪ್ರವಾಹ, ಕೋವಿಡ್ ವೇಳೆ ನೆರವು ನೀಡಿದೆ.  ಪುಣ್ಯಕೋಟಿ ನಿಧಿಗೂ ದೇಣಿಗೆ ನೀಡಿದ್ದೇವೆ. ಪ್ರಸ್ತುತ ರಾಜ್ಯದಲ್ಲಿ ಬರಗಾಲಕ್ಕೂ ಸರ್ಕಾರ ನೆರವು ನಿರೀಕ್ಷಿಸಿದರೆ  ಸ್ಪಂದಿಸಲು ಸಿದ್ಧರಿರುವುದಾಗಿ ಷಡಕ್ಷರಿ ಹೇಳಿದರು.

ರಾಜ್ಯ ಹಿರಿಯ ಉಪಾಧ್ಯಕ್ಷ ಎಂ. ವಿ. ರುದ್ರಪ್ಪ, ಬಸವರಾಜ್, ರಾಜ್ಯ ಖಜಾಂಚಿ ಸಿದ್ದರಾಮಪ್ಪ, ಜಿಲ್ಲಾಧ್ಯಕ್ಷ ವೀರೇಶ್ ಓಡೆನಪುರ, ನಿಕಟ ಪೂರ್ವ ಅಧ್ಯಕ್ಷ ಪಾಲಾಕ್ಷಿ, ಜಿಲ್ಲಾ ಕಾರ್ಯದರ್ಶಿ ಗುರುಮೂರ್ತಿ,  ಖಜಾಂಚಿ ಬಿ.ಆರ್. ತಿಪ್ಪೇಸ್ವಾಮಿ, ರಾಜ್ಯ ಪರಿಷತ್ ಸದಸ್ಯೆ ಮಂಜಮ್ಮ ಮತ್ತಿತರರು ಈ ಸಂದರ್ಭದಲ್ಲಿದ್ದರು.

error: Content is protected !!