ನಾಡಿದ್ದು ಕೆ.ಸೆಟ್ ಪರೀಕ್ಷೆ ನಗರದಲ್ಲಿ 25 ಕೇಂದ್ರಗಳು

ದಾವಣಗೆರೆ,ಜ. 10 – ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕೆಸೆಟ್ ಪರೀಕ್ಷೆ ನಡೆಯುತ್ತಿದ್ದು, ನಗರದ 25 ಕೇಂದ್ರಗಳಲ್ಲಿ ಇದೇ ದಿನಾಂಕ 13 ರಂದು ಪರೀಕ್ಷೆ ನಡೆಯಲಿದ್ದು ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ   ಪರೀಕ್ಷೆ ನಡೆಸಬೇಕೆಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಏರ್ಪಾಡಾಗಿದ್ದ ಪರೀಕ್ಷಾ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಕೆಸೆಟ್ ಪರೀಕ್ಷೆಯು ದಿನಾಂಕ 13 ರಂದು ಬೆಳಗ್ಗೆ 10 ರಿಂದ 11 ರವರೆಗೆ ಮೊದಲ ಪತ್ರಿಕೆ ಮತ್ತು ಮಧ್ಯಾಹ್ನ 12 ರಿಂದ 2 ಗಂಟೆಯವರೆಗೆ ಎರಡನೇ ಪತ್ರಿಕೆ ಪರೀಕ್ಷೆ ನಡೆಯಲಿದೆ. ಒಟ್ಟು ನಗರದಲ್ಲಿ ಸ್ಥಾಪಿಸಿರುವ 25 ಕೇಂದ್ರಗಳಲ್ಲಿ 11149 ಅಭ್ಯರ್ಥಿಗಳು ಪರೀಕ್ಷೆ ಬರೆಯುವರು. 

ಅಭ್ಯರ್ಥಿಗಳು ಯಾವುದೇ ಮೊಬೈಲ್, ಎಲೆಕ್ಟ್ರಾನಿಕ್ಸ್ ವಸ್ತುಗಳು, ಕ್ಯಾಲ್ಕುಲೇಟರ್‍ಗಳನ್ನು ಕೇಂದ್ರದೊಳಗೆ ತೆಗೆದುಕೊಂಡು ಬರುವಂತಿಲ್ಲ. ಸುಗಮ ಮತ್ತು ಶಾಂತಯುತ ಪರೀಕ್ಷೆ ಮತ್ತು ಪರೀಕ್ಷಾ ಅವ್ಯವಹಾರಗಳನ್ನು ತಡೆಗಟ್ಟಲು ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ  ಜಾರಿಗೊಳಿಸಲಾಗುತ್ತದೆ ಎಂದರು. 

ಸಭೆಯಲ್ಲಿ ಹೆಚ್ಚುವರಿ ರಕ್ಷಣಾಧಿಕಾರಿ ವಿಜಯಕುಮಾರ್ ಎಂ. ಸಂತೋಷ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

error: Content is protected !!