ಭದ್ರಾ ನೀರಾವರಿ ಸಲಹಾ ಸಮಿತಿ ನಿರ್ಣಯ ಅವೈಜ್ಞಾನಿಕ

ದಾವಣಗೆರೆ, ಜ. 6- ಜನವರಿ 20 ರಿಂದ 12 ದಿನ ನೀರು ಹರಿಸುವುದು ಮತ್ತು 20 ದಿನ ನೀರು ನಿಲ್ಲಿಸುವುದು ಎಂದು ಭದ್ರಾ ನೀರಾವರಿ ಸಲಹಾ ಸಮಿತಿ ನಿರ್ಣಯ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ದಾವಣಗೆರೆ ಜಿಲ್ಲೆಯ ರೈತರ ವಿರೋಧಿಯಾಗಿದೆ ಎಂದು ರೈತ ಮುಖಂಡ ಕೊಳೇನಹಳ್ಳಿ ಬಿ.ಎಂ. ಸತೀಶ್ ಖಂಡಿಸಿದ್ದಾರೆ. ಪ್ರಸ್ತುತ ಜಲಾಶಯದಲ್ಲಿ 21.54 ಟಿ.ಎಂ.ಸಿ ನೀರಿನ ಲಭ್ಯತೆ ಇದೆ. ಇಷ್ಟು ನೀರನ್ನು 72 ದಿನಗಳ ಕಾಲ ಹರಿಸಬಹುದಾಗಿದೆ. ಆದರೆ 6.90 ಟಿ.ಎಂ.ಸಿ ನೀರನ್ನು ಕುಡಿಯುವ ನೀರಿಗಾಗಿ ಎಂದು ಮೀಸಲಿಡಲಾಗಿದೆ ಮತ್ತು 2.40 ಟಿ.ಎಂ.ಸಿ ನೀರು ಆವಿಯಾಗುತ್ತದೆ ಎಂದು ಲೆಕ್ಕ ಹಾಕಲಾಗಿದೆ. ಇದು ತಲೆ ಬುಡವಿಲ್ಲದ ಲೆಕ್ಕಾಚಾರ. ದಾವಣಗೆರೆ ಜಿಲ್ಲೆಯ ರೈತರನ್ನು ಸಂಕಷ್ಟಕ್ಕೆ ದೂಡುವ ಕುತಂತ್ರ.

ಜಿಲ್ಲೆಯಲ್ಲಿ ನೀರಿನ ಹಾಹಾಕಾರದಿಂದ ರೈತರು ಪರಿತಪಿಸುತ್ತಿದ್ದಾರೆ. ಆದರೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ ಅವರು ಸಭೆಗೆ ಗೈರು ಹಾಜರಾಗಿರುವುದು ಜಿಲ್ಲೆಯ ರೈತರ ಹಿತಾಸಕ್ತಿ ಕಾಪಾಡುವಲ್ಲಿ ದಿವ್ಯ ನಿರ್ಲಕ್ಷ್ಯ ಧೋರಣೆ ಹೊಂದಿರುವುದು ಸ್ಪಷ್ಟವಾಗಿದೆ.

ಭದ್ರಾ ನೀರು ನಮ್ಮ ಹಕ್ಕು. ಡ್ಯಾಂನಲ್ಲಿ 72 ದಿನಗಳ ಅವಧಿಗೆ ನೀರು ಇರುವುದರಿಂದ ನೀರು ಬಿಡಿ ಎಂದು ಕೇಳಲಾಗುತ್ತಿದೆ. ರೈತರ ಕೂಗಿಗೆ ಕಿಂಚಿತ್ತೂ ಬೆಲೆ ಕೊಡದ ದಾವಣಗೆರೆ ಜಿಲ್ಲೆಯ ಜನ ಪ್ರತಿನಿಧಿಗಳು ರೈತರಿಗೆ ವಂಚನೆ ಮಾಡಿದ್ದಾರೆ.

ಈ ಹಿಂದೆ ಎಸ್. ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಡ್ಯಾಂನಲ್ಲಿ 148 ಅಡಿ ನೀರು ಇದ್ದಾಗಲೂ ಭತ್ತ ಬೆಳೆಯಲು ನೀರು ಕೊಟ್ಟರು. ಆದರೆ ಅವರ ಮಗ ಮಧು ಬಂಗಾರಪ್ಪನವರು ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಕೊಡದೇ ವಂಚಿಸಿದ್ದಾರೆ ಎಂದು ಹಳ್ಳಿಗಳಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಸತೀಶ್ ಹೇಳಿದ್ದಾರೆ.

error: Content is protected !!