ಪಿಯು ಕಾಲೇಜು ಶುಲ್ಕ ಹೆಚ್ಚಳದ ಪ್ರಸ್ತಾವನೆ ತಿರಸ್ಕಾರಕ್ಕೆ ಆಗ್ರಹ

ದಾವಣಗೆರೆ, ಜ. 7- ಪಿಯು ಕಾಲೇಜು ಶುಲ್ಕವನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ಹೆಚ್ಚಳ ಮಾಡಬೇಕೆಂದು ಇಲಾಖೆ ಬೇಡಿಕೆ ಇಟ್ಟಿದ್ದು, ರಾಜ್ಯ ಸರ್ಕಾರ ಈ ಪ್ರಸ್ತಾವನೆಯನ್ನು ಸಾರಾಸಗಟಾಗಿ ತಿರಸ್ಕರಿಸಬೇಕೆಂದು ಎಐಡಿಎಸ್‌ಓ ರಾಜ್ಯ ಸಮಿತಿ ಆಗ್ರಹಿಸಿದೆ.

ಪಿಯು ಕಾಲೇಜುಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವಿದ್ಯಾರ್ಥಿಗಳ ಶುಲ್ಕದ ಹಣದಿಂದ ಆದಾಯ ಪಡೆದಲ್ಲಿ ಸರ್ಕಾರಿ ಕಾಲೇಜುಗಳಿಗೂ, ಖಾಸಗಿ ಕಾಲೇಜುಗಳಿಗೂ ಯಾವುದೇ ವ್ಯತ್ಯಾಸವಿರುವುದಿಲ್ಲ. ಹಣಕಾಸು ಕೊರತೆಯ ನೆಪವೊಡ್ಡಿ ಎಲ್ಲಾ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಈ ರೀತಿ ಶುಲ್ಕ ಹೆಚ್ಚಿಸುತ್ತಾ ಹೋಗುತ್ತಿರುವುದು  ಅತ್ಯಂತ ಖಂಡನೀಯ ಎಂದು ರಾಜ್ಯ ಕಾರ್ಯದರ್ಶಿ  ಅಜಯ್ ಕಾಮತ್ ಹೇಳಿದ್ದಾರೆ.

ತೀವ್ರ ಆರ್ಥಿಕ ಬಿಕ್ಕಟ್ಟಿನ ಕಾರಣ ಈಗಾಗಲೇ ಎಲ್ಲಾ ಹಂತಗಳಲ್ಲಿ ವಿದ್ಯಾಭ್ಯಾಸ ತೊರೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಉನ್ನತ ಶಿಕ್ಷಣ ಶುಲ್ಕ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿಯೇ ದುಬಾರಿ ಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಡ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಯಾವುದೇ ಕಾರಣಕ್ಕು ಶುಲ್ಕ ಹೆಚ್ಚಳದ ಪ್ರಸ್ತಾವಕ್ಕೆ ಸರ್ಕಾರ ಅನುಮೋದನೆ ನೀಡಬಾರದು ಎಂದು ಆಗ್ರಹಿಸಿದ್ದಾರೆ.

ಸಂಯೋಜನೆಯ ಶುಲ್ಕ ಹೆಚ್ಚಿಸಿದಲ್ಲಿ ಅದನ್ನೂ ಸಹ ವಿದ್ಯಾರ್ಥಿಗಳ ಮೇಲೆ ಹೇರುವ ಪರಿಸ್ಥಿತಿ ಉಂಟಾಗುತ್ತದೆ. ಯಾವುದೇ ಕಾರಣಕ್ಕೂ ಈ ಬಿಕ್ಕಟ್ಟಿಗೆ ರಾಜ್ಯ ಸರ್ಕಾರ ಆಸ್ಪದ ನೀಡಬಾರದು ಎಂಬುದು ರಾಜ್ಯದ ವಿದ್ಯಾರ್ಥಿಗಳ ಆಗ್ರಹವಾಗಿದೆ ಎಂದು ಹೇಳಿದ್ದಾರೆ.

error: Content is protected !!