ಕಾಡಾ ತೀರ್ಮಾನದಿಂದ ದಾವಣಗೆರೆ ಜಿಲ್ಲೆಯ ರೈತರಿಗೆ ಅನ್ಯಾಯ

ನಾಳೆ ರೈತರ ಸಭೆ

ನಗರದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಾಡಿದ್ದು ದಿನಾಂಕ 10 ರಂದು ಬೆಳಿಗ್ಗೆ 10.30 ಕ್ಕೆ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಸಭೆ ಕರೆಯಲಾಗಿದೆ. ಸಭೆಯ ನಂತರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ದಾವಣಗೆರೆ, ಜ. 8- ನೀರು ಹರಿಸುವ ಮತ್ತು ನಿಲ್ಲಿಸುವ ವಿಚಾರದಲ್ಲಿ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಿಂದ ದಾವಣಗೆರೆ ಜಿಲ್ಲೆಯ ರೈತರಿಗೆ ತೀವ್ರ ಅನ್ಯಾಯವಾಗಲಿದೆ ಎಂದು ರೈತ ಮುಖಂಡ ಬಿ.ಎಂ. ಸತೀಶ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. 20 ರಿಂದ 12 ದಿನಗಳ ಕಾಲ ನೀರು ಹರಿಸುವುದು ಮತ್ತು 20 ದಿನ ನಿಲ್ಲಿಸುವುದು ಎಂಬ ಕಾಡಾ ಸಮಿತಿ ಸಭೆಯ ತೀರ್ಮಾನ ಸರಿಯಲ್ಲ ಎಂದರು.

ಕೇವಲ 12 ದಿನಗಳು ನೀರು ಹರಿಸಿದರೆ ದಾವಣಗೆರೆ ಭಾಗದ ಜಮೀನುಗಳಿಗೆ ನೀರು ತಲುಪುವುದಿಲ್ಲ. ಅಧಿಕಾರಿಗಳ ಹೇಳಿಕೆ ಪ್ರಕಾರ ಪ್ರತಿ ದಿನ ಎಡ ಮತ್ತು ಬಲದಂಡೆಗಳಿಗೆ ನೀರು ಬಿಡಲು 0.29 ಟಿಎಂಸಿ ನೀರು ಬೇಕಾಗುತ್ತದೆ. ಈಗ ಭದ್ರಾ ಜಲಾಶಯದಲ್ಲಿ ಬಳಕೆಗೆ ಬಾರದ ಡೆಡ್ ಸ್ಟೋರೇಜ್ ತೆಗೆದು ಬಳಕೆಗೆ ಬರುವ ನೀರು 21.54 ಟಿಎಂಸಿ ಇದೆ. ಇದನ್ನು ಪ್ರತಿ ದಿನ 0.29 ರಂತೆ 74 ದಿನಗಳು ಹರಿಸಬಹುದು. ಆದರೆ ಅಧಿಕಾರಿಗಳು 6.90 ಟಿಎಂಸಿ ನೀರನ್ನು ಕುಡಿಯುವ ನೀರಿಗೆ, ಕೈಗಾರಿಕೆಗೆಂದು ಮತ್ತು ಆವಿಯಾಗುವ ನೀರು 1.91 ಟಿಎಂಸಿ ಎಂದು ಮೀಸಲಿಟ್ಟು ಲೆಕ್ಕ ಮಾಡುತ್ತಿದ್ದಾರೆ.

ಕುಡಿಯುವ ನೀರಿಗಾಗಿ ಪ್ರತ್ಯೇಕ ನಾಲೆಯಲ್ಲಿ ನೀರು ಬಿಟ್ಟ ಉದಾಹರಣೆ ಜಲಾಶಯದ ಇತಿಹಾಸದಲ್ಲೇ ಇಲ್ಲ. ನಾಲೆಗೆ ನೀರು ಹರಿಸಿದಾಗ ಕುಡಿಯುವ ನೀರಿಗಾಗಿ ಸೂಳೆಕೆರೆ, ದಾವಣಗೆರೆ ಟಿವಿ ಸ್ಟೇಷನ್ ಕೆರೆ, ಕುಂದುವಾಡ ಕೆರೆ ಸೇರಿದಂತೆ ಇನ್ನಿತರೆ ಕೆರೆಗಳಿಗೆ ತುಂಬಿಸಿಕೊಳ್ಳಬಹುದು. ಆದ್ದರಿಂದ ಕುಡಿಯುವ ನೀರಿಗಾಗಿ ಪ್ರತ್ಯೇಕವಾಗಿ ನೀರು ಮೀಸಲಿಡುವ ಅವಶ್ಯಕತೆ ಇಲ್ಲ ಎಂದರು.

1.91 ಟಿಎಂಸಿ ನೀರು ಆವಿಯಾಗುತ್ತದೆ ಎನ್ನುವ ಲೆಕ್ಕಾಚಾರ ತಲೆ ಬುಡವಿಲ್ಲದ್ದು, ಇದು ರೈತರನ್ನು ಮೂರ್ಖರನ್ನಾಗಿಸುವ ಕುತಂತ್ರ ಎಂದು ಕಿಡಿಕಾರಿದರು.

ಆವಿಯಾಗುವ ನೀರನ್ನು ಲೆಕ್ಕ ಹಾಕುವ ಅಧಿಕಾರಿಗಳು ಡಿಸೆಂಬರ್ ತಿಂಗಳಿನಿಂದ ಮೇ ತಿಂಗಳವರೆಗೆ ಜಲಾಶಯಕ್ಕೆ ಬರುವ ಒಳಹರಿವಿನ ಪ್ರಮಾಣ ಲೆಕ್ಕ ಮಾಡದೇ ಮುಚ್ಚಿಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಗೆ ಹರಿಸುವ ಎಡದಂಡೆಗೆ ಪ್ರತ್ಯೇಕ ವೇಳಾಪಟ್ಟಿ ನಿಗದಿ ಮಾಡಿದ್ದು, ಜನವರಿ 10 ರಿಂದಲೇ 16 ದಿನ ನೀರು ಹರಿಸುವುದು ಮತ್ತು 15 ದಿನ ನಿಲ್ಲಿಸುವುದು ಎಂದು ನಿರ್ಣಯಿಸಲಾಗಿದೆ. ಎಡದಂಡೆಗೆ ಮತ್ತು ಬಲದಂಡೆಗೆ ಬೇರೆ ಬೇರೆ ವೇಳಾಪಟ್ಟಿ ಪ್ರಕಟಣೆ ಮಾಡಿರುವುದು ಜಲಾಶಯದ ಇತಿಹಾಸದಲ್ಲಿಯೇ ಇದೇ ಮೊದಲು ಎಂದು ಹೇಳಿದರು.

ಎಸ್ಸೆಸ್ಸೆಂ ನಿರ್ಲಕ್ಷ್ಯ: ದಾವಣಗೆರೆ ಜಿಲ್ಲೆಯ ರೈತರ ಜೀವನಾಡಿ ಭದ್ರಾ ಜಲಾಶಯದಿಂದ ನೀರು ಹರಿಸಿ ಅಡಿಕೆ, ತೆಂಗು ಇತರೆ ಬಹು ವಾರ್ಷಿಕ ಬೆಳೆಗಳ ತೋಟಗಳನ್ನು ಭೀಕರ ಬರಗಾಲದ ಬೇಗುದಿಯಿಂದ ಉಳಿಸಿಕೊಳ್ಳಲು ನೆರವಾಗಬೇಕಿದ್ದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಾಡಾ ಸಮಿತಿ ಸಭೆಗೆ ಗೈರು ಹಾಜರಾಗಿದ್ದಾರೆ. ಇದು ರೈತ ವಿರೋಧಿ ನಡೆಯಾಗಿದೆ ಎಂದು ಸತೀಶ್ ದೂರಿದರು

ಬರದಿಂದ ತತ್ತರಿಸಿರುವ ರೈತರ ಸಂಕಷ್ಟಕ್ಕೆ ಧಾವಿಸುವ ಇಚ್ಛಾಶಕ್ತಿ ಅವರಿಗಿಲ್ಲವಾಗಿದೆ. ರೈತರ ಹಿತ  ಬಯಸದ ಇಂತವರು ಸಚಿವರಾಗಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದರು.

ದಾವಣಗೆರೆ ಜಿಲ್ಲೆಯ ಕೊನೆ ಭಾಗಕ್ಕೆ ತಿಂಗಳಿಗೊಂದು ಸಲವಾದರೂ ನೀರು ತಲುಪದಿದ್ದರೆ ಜಿಲ್ಲೆಯ ಬೋರ್‌ವೆಲ್ ಗಳು ಸಂಪೂರ್ಣ ವಿಫಲವಾಗುತ್ತವೆ. ಇದರಿಂದ ತೋಟಗಳು ನಾಶವಾಗುತ್ತವೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಲಿದೆ. ಭದ್ರಾ ನೀರು ನಮ್ಮ ಹಕ್ಕು. ಜಲಾಶಯದಲ್ಲಿ ನೀರು ಇದೆ ಕೇಳುತ್ತೇವೆ. ರೈತರು ಬೀದಿಗಿಳಿದು ಹೋರಾಟ ಮಾಡಬೇಕೆಂದರು.

ಪತ್ರಿಕಾಗೋಷ್ಠಿಯಲ್ಲಿ ರೈತರ ಮುಖಂಡರಾದ ಲೋಕಿಕೆರೆ ನಾಗರಾಜ್,  ಬೆಳವನೂರು ನಾಗೇಶ್ವರ  ರಾವ್, ಹೆಚ್.ಆರ್. ಲಿಂಗರಾಜ್, ಕೆ.ಬಿ. ಕೊಟ್ರೇಶ್‌, ಧನಂಜಯ ಕಡ್ಲೇಬಾಳು, ಕುಂದುವಾಡದ ಹೆಚ್.ಜಿ. ಗಣೇಶಪ್ಪ, ಮಾಜಿ ಮೇಯರ್ ಗುರುನಾಥ್, ಕಲಪನಹಳ್ಳಿ ಮಂಜುನಾಥ್, ಕಲಪನಹಳ್ಳಿ ಸತೀಶ್, ಶಿರಮಗೊಂಡನಹಳ್ಳಿ ಮಂಜುನಾಥ್, ಹನುಮಂತಪ್ಪ, ಅಣ್ಣಪ್ಪ, ಮಹೇಶ್ ಮತ್ತಿತರರಿದ್ದರು.

error: Content is protected !!