ಹಾಲಿನ ದರ ಇಳಿಕೆ ವಿರೋಧಿಸಿ ಶಿಮುಲ್ ಎದುರು ನಾಳೆ ಪ್ರತಿಭಟನೆ

ದಾವಣಗೆರೆ, ಜ. 7- ಹಾಲಿನ ದರವನ್ನು ಪದೇ ಪದೇ ಇಳಿಕೆ ಮಾಡುತ್ತಿರುವ ಶಿಮುಲ್ ವಿರುದ್ಧ ನಾಡಿದ್ದು ದಿನಾಂಕ 9 ರ ಮಂಗಳವಾರ ಬೆಳಿಗ್ಗೆ 10.30 ಕ್ಕೆ ಶಿವಮೊಗ್ಗ ಸಮೀಪವಿರುವ ಶಿವಮೊಗ್ಗ ಹಾಲು ಒಕ್ಕೂಟದ (ಶಿಮುಲ್) ಎದುರು  ಬೃಹತ್ ಪ್ರತಿಭಟನೆ ನಡೆಸುವುದಾಗಿ ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ ಅಧ್ಯಕ್ಷ ಪ್ರವೀಣ್ ಪಟೇಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಾಲು ಉತ್ಪಾದಕರ ಬೇಡಿಕೆಗಳು ಈಡೇರುವವರೆಗೂ ಸ್ಥಳದಲ್ಲೇ ಪ್ರತಿಭಟನೆ ನಡೆಸಲಾಗುವುದು. ಶಿವಮೊಗ್ಗ ಹಾಲು ಉತ್ಪಾದಕರ ಸಂಘ ಕಳೆದ 4 ತಿಂಗಳಲ್ಲಿ ಪಶು ಆಹಾರ, ಔಷಧಗಳ ಬೆಲೆ ಹೆಚ್ಚಿಸಿದೆ. ಗ್ರಾಹಕರಿಗೆ ಪ್ರತಿ ಲೀಟರ್‌ಗೆ 42 ರಿಂದ 43 ರೂ.ನಿಗದಿ ಪಡಿಸಲಾಗಿದೆ. ಆದರೆ ಹಾಲು ಉತ್ಪಾದಕರಿಗೆ 29.50 ರೂ. ಕೊಡಲಾಗುತ್ತಿರುವುದರಿಂದ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಉತ್ಪಾದನೆ ವೆಚ್ಚದ ಆಧಾರದಲ್ಲಿ ಪ್ರತಿ ಲೀಟರ್ ಗೆ ಕನಿಷ್ಠ 60 ರೂಪಾಯಿ ನೀಡಬೇಕೆಂದು ಆಗ್ರಹಿಸಿದರು.

ಶಿವಮೊಗ್ಗ ಹಾಲು ಒಕ್ಕೂಟ ರೈತರಿಂದ ಹಾಲು ಖರೀದಿಸಿ ಖಾಸಗಿಯವರಿಗೆ ಮಾರುವ ಮೂಲಕ ಲಾಭ ಮಾಡಿಕೊಳ್ಳುತ್ತಿದೆ. ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳ ರೈತರು ಕಟ್ಟಿರುವ ಒಕ್ಕೂಟ ಎಂದು ನಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಘದ ಪದಾಧಿಕಾರಿಗಳಾದ ಚಿದಾನಂದ್, ಪ್ರಕಾಶ್ ನೇರ್ಲಿಗಿ, ವಸಂತಮ್ಮ, ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!