ಚಿತ್ರದುರ್ಗದಲ್ಲಿ 28ರಂದು ಶೋಷಿತರ ಜಾಗೃತಿ ಸಮಾವೇಶ

ದಾವಣಗೆರೆ, ಜ.5- ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಇದೇ ಜ.28ರಂದು `ಶೋಷಿತರ ಜಾಗೃತಿ ಸಮಾವೇಶ’ ಹಮ್ಮಿಕೊಳ್ಳಲಾಗಿದೆ.

ಚಿತ್ರದುರ್ಗದ ಶ್ರೀ ಬಸವ ಮೂರ್ತಿ ಮಾದಾರ ಚನ್ನಯ್ಯ ಪೀಠದ ಪಕ್ಕದ ಮೈದಾನದಲ್ಲಿ ನಡೆಯುವ ಈ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಭಾಗವಹಿಸಲಿದ್ದಾರೆ ಎಂದು ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ಹೆಚ್.ಕಾಂತರಾಜು ವರದಿಯನ್ನು ಸರ್ಕಾರ ಕೂಡಲೇ ಸ್ವೀಕರಿಸಿ ಯಥಾವತ್ತಾಗಿ ಅಂಗೀಕರಿಸಿ ಜಾರಿಗೊಳಿಸಬೇಕು. ಕೇಂದ್ರ ಸರ್ಕಾರವು ಜಾತಿವಾರು, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ನಡೆಸಬೇಕು. ಇಡಬ್ಲೂಎಸ್ ಶೇ.10ರ ಮೀಸಲಾತಿ ರದ್ದು ಪಡಿಸಬೇಕು. ಮಹಿಳಾ ರಾಜಕೀಯ ಕಾಯ್ದೆ ಜಾರಿ ಮಾಡಬೇಕು. ರಾಜಕೀಯ ಕ್ಷೇತ್ರದಲ್ಲೂ ಒಳ ಮೀಸಲಾತಿ ಕಲ್ಪಿಸಬೇಕು.  ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಹಿಂದುಳಿದ ಜಾತಿ ಹಾಗೂ ಅಲ್ಪಸಂಖ್ಯಾತರಿಗೆ ರಾಜಕೀಯ ಮೀಸಲಾತಿ ಕಲ್ಪಿಸಬೇಕು. ಖಾಸಗಿ ಕ್ಷೇತ್ರಕ್ಕೂ ಮೀಸಲಾತಿ ವಿಸ್ತರಿಸಬೇಕು. ಜನಸಂಖ್ಯೆಗನುಗುಣವಾಗಿ ಮೀಸಲಾತಿ ಶೇಕಡವಾರು ಹೆಚ್ಚಿಸಬೇಕು ಎಂಬುದು ನಮ್ಮ ಹಕ್ಕೊತ್ತಾಯಗಳಾಗಿವೆ ಎಂದವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಹೊದಿಗೆರೆ ರಮೇಶ್, ಎಣ್ಣೆಗೆರೆ ವೆಂಕಟರಾವ್, ಡಿ.ಬಸವರಾಜ್, ವೆಂಕಟ ಸುಬ್ಬರಾಜ್, ಎಂ. ರಾಮಚಂದ್ರಪ್ಪ, ಅಂಜಿನಪ್ಪ, ಸುಬ್ರಹ್ಮಣ್ಯ, ಹೆಚ್.ಚಂದ್ರಪ್ಪ ಇತರರು ಉಪಸ್ಥಿತರಿದ್ದರು.

error: Content is protected !!