ಸರ್ಕಾರ ಕರ ಸೇವಕರ ಪರವೋ, ಭಯೋತ್ಪಾದಕರ ಪರವೋ ?

ಸರ್ಕಾರ ಕರ ಸೇವಕರ ಪರವೋ, ಭಯೋತ್ಪಾದಕರ ಪರವೋ ?

ಸ್ಪಷ್ಟಪಡಿಸಲು ಮುಖ್ಯಮಂತ್ರಿಗೆ ರೇಣುಕಾಚಾರ್ಯ ಆಗ್ರಹ

ದಾವಣಗೆರೆ, ಜ.5- ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವು ಕರ  ಸೇವಕರ ಪರವೋ ಅಥವಾ ಭಯೋತ್ಪಾದಕರ ಪರವೋ ಎಂಬುದನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ದೇಶದ ಜನತೆಗೆ ಸ್ಪಷ್ಟಪಡಿಸಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಗ್ರಹಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಜನರಲ್ಲಿ ಭಯ ಹುಟ್ಟಿಸುವ ದೃಷ್ಟಿಯಿಂದ 32 ವರ್ಷದ ಹಿಂದಿನ ಪ್ರಕರಣದಲ್ಲಿ ಪ್ರಶಾಂತ್ ಪೂಜಾರಿ ಅವರನ್ನು ಬಂಧಿಸಲಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವುದು ಕಾಂಗ್ರೆಸ್ ಸರ್ಕಾರವಲ್ಲ, ದುರಹಂಕಾರದ, ತಾಲಿಬಾನ್ ಆಡಳಿತ ಎಂದು ಕಿಡಿಕಾರಿದರು.

ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಹಣವಿಲ್ಲ, ರೈತರಿಗೆ ಬರ ಪರಿಹಾರ ನೀಡಲು ಹಣವಿಲ್ಲ. ಆದರೆ ಅಲ್ಪಸಂಖ್ಯಾತರಿಗೆ ಸಾವಿರಾರು ಕೋಟಿ ರೂ. ಕೊಡಲು ಸರ್ಕಾರದ ಬಳಿ ಹಣವಿದೆಯೇ? ಇದು ಹಿಂದೂ ವಿರೋಧಿ ಸರ್ಕಾರ. ಈ ಸರ್ಕಾರದ ವಿರುದ್ಧ ಹೋರಾಟ ನಡೆಸಲು ನಾವು ಸಿದ್ದರಿದ್ದೇವೆ ಎಂದು ಹೇಳಿದರು.

ರಾಮ ಮಂದಿರ ನಿರ್ಮಾಣ ಪ್ರತಿ ಭಾರತೀಯರ ಸ್ವಾಭಿಮಾನದ ಪ್ರಶ್ನೆ. ಮಂದಿರ ನಿರ್ಮಾಣಕ್ಕಾಗಿ ಹೋರಾಟ ನಡೆಸಿದವರ ಬಂಧನ ಹಿಂದೂಗಳ ಭಾವನೆಗೆ ವಿರುದ್ಧವಾದದ್ದು. ಮುಖ್ಯಮಂತ್ರಿಗಳಿಗೆ ಧೈರ್ಯವಿದ್ದರೆ ನಮ್ಮನ್ನೂ ಬಂಧಿಸಲಿ ಎಂದು ಸವಾಲು ಹಾಕಿದರು.

ಇದೇ ಜ.22ಕ್ಕೆ ನಡೆಯಲಿರುವ ಶ್ರೀ ರಾಮ ಮಂದಿರದ ಉದ್ಘಾಟನೆಗಾಗಿ ವಿಶ್ವವೇ ಕಾತರದಿಂದ ಕಾಯುತ್ತಿದೆ. ಆದರೆ ಸಿದ್ಧರಾಮಯ್ಯ ಮಾತ್ರ ರಾಮ ಮಂದಿರದ ಸ್ಥಳ ವಿವಾದ ಇನ್ನೂ ಇದೆ ಎಂದಿದ್ದಾರೆ. ಮಂದಿರದ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿದೆ. ಸಿದ್ದರಾಮಯ್ಯನವರಿಗೆ ಇದು ಗೊತ್ತಿಲ್ಲವೇ? ಅವರಿಗೆ ಕಾನೂನಿನ ಮೇಲೆ ಗೌರವವಿಲ್ಲ. ಅವರೇನು ಸುಪ್ರೀಂ ಕೋರ್ಟ್‌ಗಿಂತ ದೊಡ್ಡವರೇ? ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.

ಮಂದಿರ ಉದ್ಘಾಟನೆ ವೇಳೆ ಗೋದ್ರಾ ಹತ್ಯಾಕಾಂಡದಂತಹ ಘಟನೆ ಮರುಕಳುಹಿಸ ಬಹುದು ಎಂದು  ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ. ಇದರಿಂದ ದೇಶದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಲಾಗುತ್ತಿದೆಯೇ? ಎಂಬ ಅನುಮಾನವಿದೆ. ಮುಖ್ಯಮಂತ್ರಿ ಪುತ್ರ ಯತೀಂದ್ರ ಸಿದ್ಧರಾಮಯ್ಯ ಭಾರತ ಹಿಂದೂ ರಾಷ್ಟ್ರವಾಗಬಾರದು ಎಂಬ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು.

ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದಾಗ ತನ್ವೀರ್ ಸೇಠ್ ತಂದೆ ನೇತೃತ್ವದಲ್ಲಿ ಕೋಮುಗಲಭೆ ನಡೆದಿತ್ತು. ಆಗ ವೀರೇಂದ್ರ ಪಾಟೀಲ್ ರಾಜೀನಾಮೆ ನೀಡಿದ್ದರು. ಈಗ ಸಿದ್ದರಾಮಯ್ಯ ಕೆಳಗಿಳಿಸಲು ಕಾಂಗ್ರೆಸ್ ಒಳಗೆಯೇ ಷಡ್ಯಂತ್ರ ನಡೆಯುತ್ತಿದೆ.  ಕಾಂಗ್ರೆಸ್ ಒಡೆದ ಮನೆಯಾಗಿದೆ ಎಂದು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್, ಆರೈಕೆ ಆಸ್ಪತ್ರೆ ಮುಖ್ಯಸ್ಥ ಟಿ.ಜಿ. ರವಿಕುಮಾರ್, ಮುಖಂಡರುಗಳಾದ ಲೋಕಿಕೆರೆ ನಾಗರಾಜ್, ಕೆ.ಪಿ. ಕಲ್ಲಿಂಗಪ್ಪ,  ರಾಜು ವೀರಣ್ಣ, ಪ್ರಶಾಂತ್ ಶೆಟ್ರು ಅಣಜಿ, ದುಂದೂರು ಜಯರುದ್ರಪ್ಪ, ದಯಾನಂದ್, ಚಂದ್ರು ಪಾಟೀಲ್, ಅಣಜಿ ಬಸವರಾಜ್ ಇತರರು ಉಪಸ್ಥಿತರಿದ್ದರು.

error: Content is protected !!