ರಾಮ ದೇವಸ್ಥಾನದ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡದಿರುವುದು ರಾಜ್ಯದ ಜನತೆಗೆ ಮಾಡಿರುವ ಅವಮಾನ.
ದಾವಣಗೆರೆ, ಜ. 2 – ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬರು ಕೊಟ್ಟಿರುವ ಅಕ್ಕಿಗೆ ಅರಿಶಿಣ ಹಚ್ಚಿ ಮಂತ್ರಾಕ್ಷತೆ ಎಂದು ರಾಜ್ಯಾದ್ಯಂತ ಹಂಚಲಾಗುತ್ತಿದೆ ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ವ್ಯಂಗ್ಯವಾಡಿದ್ದಾರೆ.
ರಾಮ ಮಂದಿರದ ಉದ್ಘಾಟನೆಯ ಹಿನ್ನೆಲೆ ಯಲ್ಲಿ ದೇವಾಲಯದಲ್ಲಿ ಪೂಜಿಸಲಾದ ಅಕ್ಷತೆ ಯನ್ನು ದೇಶಾದ್ಯಂತ ವಿತರಿಸಲಾಗುತ್ತಿದೆ. ಶ್ರೀ ರಾಮ ಜನ್ಮ ಭೂಮಿ ಟ್ರಸ್ಟ್ನ ಈ ಅಕ್ಷತೆಯನ್ನು ವಿಶ್ವ ಹಿಂದೂ ಪರಿಷತ್ ಮೂಲಕ ವಿತರಣೆ ಮಾಡುತ್ತಿದೆ.
ಈ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ ಬಸವಂತಪ್ಪ, ರಾಮ ಮಂದಿರವನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದಿದ್ದಾರೆ.
ರಾಮ ಮಂದಿರ ಉದ್ಘಾಟನೆಯಾದ ಮೇಲೆ ನಾವೂ ಹೋಗಿ ಕೈ ಮುಗಿದು ಬರುತ್ತೇವೆ. ರಾಮ, ಸೀತೆ, ಲಕ್ಷ್ಮಣ, ಹನುಮಂತರನ್ನು ಯಾವುದೇ ಪಕ್ಷವಾದರೂ ರಾಜಕೀಯಕ್ಕೆ ಬಳಸಬಾರದು ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿ ಕಡೆಗೆ, ರೈತರ ಬಗ್ಗೆ ಚಿಂತನೆ ನಡೆಸಬೇಕಿತ್ತು. ಆದರೆ, ಕೇವಲ ಅಧ್ಯಾತ್ಮದ ಕಡೆ ಗಮನ ಹರಿಸಲಾಗುತ್ತಿದೆ ಎಂದವರು ಆಕ್ಷೇಪಿಸಿದರು.
ರಾಜ್ಯದಲ್ಲಿ ಬರ ಇದೆ. ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಸಾಲ ಮನ್ನಾ ಮಾಡಲಾಗಿತ್ತು. ಈ ಬಾರಿಯೂ ದೇಶಾದ್ಯಂತ ಸಾಲ ಮನ್ನಾ ಮಾಡಲಿ. ಕನಿಷ್ಠ ಬರ ಇರುವ ಕರ್ನಾಟಕದಲ್ಲಾದರೂ ಸಾಲ ಮನ್ನಾ ಮಾಡಲಿ ಎಂದು ಆಗ್ರಹಿಸಿದರು.
ರಾಜ್ಯಕ್ಕೆ ಕೇಂದ್ರದ ತಂಡಗಳು ಬಂದು ಅಧ್ಯಯನ ಮಾಡಿ ಹೋಗಿವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಾಯಕೊಂಡಕ್ಕೆ ಬಂದು ಬರ ಪರಿಸ್ಥಿತಿ ವೀಕ್ಷಣೆ ಮಾಡಿದ್ದಾರೆ. ಪ್ರಧಾನ ಮಂತ್ರಿ ಹಾಗೂ ಕೇಂದ್ರ ಗೃಹ ಸಚಿವರ ಬಳಿ ಮನವಿ ಮಾಡಿ ಪರಿಹಾರ ಬಿಡುಗಡೆ ಮಾಡಿಸಲಿ ಎಂದವರು ಒತ್ತಾಯಿಸಿದರು.
ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ಬರ ಪರಿಹಾರಕ್ಕೆ ಕೇಂದ್ರವೂ ನೆರವಾಗಿತ್ತು. ಈಗ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂದು ಆಕ್ಷೇಪಿಸಿದರು.