ದಾವಣಗೆರೆ, ಡಿ. 29- 2024ನೇ ವರ್ಷಕ್ಕೆ ಹೆಜ್ಜೆ ಇಡುತ್ತಿರುವ ಜಿಲ್ಲೆಯ ಜನತೆಗೆ ಶುಭಾಶಯ ಕೋರಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್ ಅವರು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಹಿತದೃಷ್ಟಿ ಯಿಂದ ಕೆಲವು ಸೂಚನೆಗಳನ್ನೂ ನೀಡಿದ್ದಾರೆ.
ಹೊಸ ವರ್ಷಾಚರಣೆ ಪ್ರಯುಕ್ತ ಕುಡಿದು ವಾಹನ ಚಾಲನೆ ಮಾಡುವುದು, ವಾಹನಗಳಲ್ಲಿ ಹೆಚ್ಚಿನ ಜನರು ಸವಾರಿ ಮಾಡುವುದನ್ನು ನಿಷೇಧಿಸಿದ್ದು, ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
ನಗರದ ಆಯಕಟ್ಟಿನ ಸ್ಥಳಗಳಲ್ಲಿ, ಮಹಿಳೆಯರ ಪಿ.ಜಿ., ಮತ್ತು ಹಾಸ್ಟೆಲ್‍ಗಳ ಬಳಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿರುತ್ತದೆ. ಬಾರ್ ಮತ್ತು ರೆಸ್ಟೋರೆಂಟ್, ವೈನ್ ಶಾಪ್‍ಗಳು ನಿಗದಿಪಡಿಸಿದ ಸಮಯಕ್ಕೆ ಬಂದ್ ಮಾಡಲು ಸೂಚಿಸಲಾಗಿದೆ.
ಆಯಕಟ್ಟಿನ ಸ್ಥಳಗಳಲ್ಲಿ ಕೆಎಸ್‍ಆರ್‍ಪಿ ಮತ್ತು ಡಿಎಆರ್ ತುಕಡಿಗಳನ್ನು ನಿಯೋಜಿ ಸಲಾಗಿದೆ. ಹೊಸ ವರ್ಷಾಚರಣೆಯಲ್ಲಿ ಯುವಕರು ಅಶ್ಲೀಲವಾಗಿ, ಅಸಭ್ಯವಾಗಿ ವರ್ತನೆ ಮಾಡಿದರೆ ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ನಗರದ ಹೊರ ವಲಯಗಳಾದ ಕೊಂಡಜ್ಜಿ ಕೆರೆ, ದೇವರಬೆಳಕೆರೆ ಚೆಕ್ ಡ್ಯಾಂ ಮತ್ತು ಇತರೆ ಹೊರ ಭಾಗಗಳಲ್ಲೂ ಪೊಲೀಸ್ ನಿಯೋಜಿಸಲಾಗಿದೆ. ವಾಹನಗಳನ್ನು ಅತೀ ವೇಗವಾಗಿ ಚಾಲನೆ ಮಾಡುತ್ತಾ, ಸಾರ್ವಜನಿಕರಿಗೆ ತೊಂದರೆಯಾಗುವಂತೆ ಜೋರಾಗಿ ಕೂಗುವುದು, ಕಿರುಚುವುದನ್ನು ನಿಷೇಧಿಸಿ ಲಾಗಿದೆ. ಜಿಲ್ಲೆಯ ತಾಲ್ಲೂಕು ಕೇಂದ್ರಗಳಾದ ಹರಿಹರ, ಹೊನ್ನಾಳಿ, ಚನ್ನಗಿರಿ, ಜಗಳೂರು, ನ್ಯಾಮತಿ ಪಟ್ಟಣಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ನಗರದ ವಿವಿಧ ಕಡೆಗಳಲ್ಲಿ ಚೆಕ್ ಪೋಸ್ಟ್‍ಗಳನ್ನು ತೆರೆದಿದ್ದು, ಕುಡಿದು ವಾಹನಗಳನ್ನು ಚಾಲನೆ ಮಾಡುವವರ, ತ್ರಿಬಲ್ ರೈಡಿಂಗ್ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು.
ಕೋವಿಡ್ 19 ಉಪ ತಳಿ ಜೆಎನ್.1 ವೈರಸ್ ವ್ಯಾಪಿಸುತ್ತಿರುವುದರಿಂದ ಸರ್ಕಾರದ ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜನ ಸಂದಣಿ ಪ್ರದೇಶಗಳಲ್ಲಿ ಪಟಾಕಿಗಳನ್ನು ಸಿಡಿಸಬಾರದು.ಸೌಂಡ್ ಸಿಸ್ಟಂ ಮತ್ತು ಡಿಜೆಗಳನ್ನು ಉಪಯೋಗಿಸಬಾರದು ಎಂದು ಎಸ್ಪಿ ಉಮಾ ಅವರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.