ದಾವಣಗೆರೆ, ಡಿ.26- ವೀರಶೈವ-ಲಿಂಗಾಯತ ಸಮಾಜದವರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಅಗತ್ಯವಿದೆ ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಾ.ಕೆ.ಬಿ. ಗುಡಸಿ ಅಭಿಪ್ರಾಯಿಸಿದರು.
ಇಲ್ಲಿನ ಎಂ.ಬಿ.ಎ. ಕಾಲೇಜು ಆವರಣದಲ್ಲಿ ನಡೆಯುತ್ತಿರುವ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ 24 ನೇ ಮಹಾ ಅಧಿವೇಶನದಲ್ಲಿ ಶೈಕ್ಷಣಿಕ ಅಧಿವೇಶನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಮೀನು ಇದೆ. ಮಕ್ಕಳು ನೋಡಿಕೊಳ್ಳುತ್ತಾರೆ ಎಂದು ರೈತಾಪಿ ವರ್ಗ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ತಾತ್ಸಾರ ಮಾಡುತ್ತದೆ. ಆದರೆ ಇರುವಷ್ಟು ಭೂಮಿಯನ್ನು ಎಷ್ಟು ಜನರಿಗೆ ಹಂಚಲು ಸಾಧ್ಯ?ಈ ನಿಟ್ಟಿನಲ್ಲಿ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಬೇಕು. ಆಗ ಮಾತ್ರ ಸಮಾಜವೂ ಪ್ರಗತಿ ಹೊಂದಲು ಸಾಧ್ಯ ಎಂದು ಹೇಳಿದರು.
ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಡಿ. ಕುಂಬಾರ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ವೀರಶೈವ ಮಠಗಳು ಹಾಗೂ ಸಂಸ್ಥೆಗಳನ್ನು ಇಂದು ಜಗತ್ತೇ ನಿಬ್ಬೆರಗಾಗಿ ನೋಡುತ್ತಿದೆ ಎಂದು ಹೇಳಿದರು.
ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಸಂಸ್ಥೆಗಳೂ ಪ್ರಗತಿಯ ಹಾದಿಯಲ್ಲಿದ್ದು, ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ತಮ್ಮ ಕರ್ತವ್ಯ ಮುಗಿಯಿತು ಎಂದು ಪೋಷಕರು ಭಾವಿಸದೆ, ಗುಣಮಟ್ಟದ ಶಿಕ್ಷಣ ಕೊಡಿಸುವತ್ತ ಗಮನ ಹರಿಸಬೇಕು ಎಂದು ಹೇಳಿದರು.
ನಮ್ಮ ಕರ್ಮಫಲಗಳಿಗೆ ಅನುಗುಣವಾಗಿ ನಮಗೆ ಸಂಪತ್ತು ಸಿಗುತ್ತದೆ. ನಾವು ಗಳಿಸುವ ಸಂಪತ್ತನ್ನು ಕಳ್ಳರು ದೋಚಬಹುದು. ಆದರೆ ವಿದ್ಯಾ ಸಂಪತ್ತನ್ನು ಮಾತ್ರ ಯಾರೂ ದೋಚಲಾಗದು. ಈ ಹಿನ್ನೆಲೆಯಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಿ ಎಂದು ಪೋಷಕರಿಗೆ ಕಿವಿ ಮಾತು ಹೇಳಿದರು.
ಉದ್ಯಮಿ ಬಿ.ಸಿ. ಉಮಾಪತಿ ಅಧ್ಯಕ್ಷತೆ ವಹಿಸಿದ್ದರು. ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ವೀರಣ್ಣ ಚರಂತಿ ಮಠ, ಡಾ. ಡಿ.ವಿ. ಪರಶಿವಮೂರ್ತಿ, ಡಾ. ಬಿ.ಎಲ್. ಪಾಟೀಲ್, ಶಾಸಕರಾದ ಹಂಪನಗೌಡ ಬಾದರ್ಲಿ, ಜಿ.ಎಸ್. ಪಾಟೀಲ್, ಶರಣಗೌಡ ಕಂದಕೂರ ಮತ್ತಿತರರಿದ್ದರು.