ನಗರದಲ್ಲಿ ಇಂದು-ನಾಳೆ ಅಭಿಷೇಕ, ಪಡಿಪೂಜೆ

ನಗರದಲ್ಲಿ ಇಂದು-ನಾಳೆ ಅಭಿಷೇಕ, ಪಡಿಪೂಜೆ

ದಾವಣಗೆರೆ, ಡಿ. 22 – ನಗರದ ಜಿಲ್ಲಾ ಸಾರ್ವಜನಿಕ ಅಯ್ಯಪ್ಪ ಸೇವಾ ಟ್ರಸ್ಟ್ ವತಿಯಿಂದ ಮೊದಲ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಅಭಿಷೇಕ, ಹೋಮ ಮತ್ತು ದೀಪೋತ್ಸವ ಹಾಗೂ ಪಡಿಪೂಜೆ ಕಾರ್ಯಕ್ರಮವನ್ನು ನಾಳೆ ದಿನಾಂಕ 23 ಹಾಗೂ 24ರಂದು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ರಾಘವೇಂದ್ರ ಎಂ. ಚವ್ಹಾಣ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಹೊಳೇಹೊನ್ನೂರು ತೋಟದ ಆವರಣದಲ್ಲಿ ಎಲ್ಲ ಅಯ್ಯಪ್ಪ ಸೇವಾ ಸಂಸ್ಥೆಗಳು ಜೊತೆಗೂಡಿ ಕಾರ್ಯಕ್ರಮ ಆಯೋಜಿಸುತ್ತಿವೆ ಎಂದು ಹೇಳಿದರು.

ನಾಳೆ ದಿನಾಂಕ 23ರ ಶನಿವಾರ ಬೆಳಿಗ್ಗೆ 11 ಗಂಟೆಗೆ ನಡೆಯುವ ಅಭಿಷೇಕ ಕಾರ್ಯಕ್ರಮದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಪಾಲ್ಗೊಳ್ಳಲಿದ್ದಾರೆ. ಈ ದಿನದ ಕಾರ್ಯಕ್ರಮದಲ್ಲಿ ಐಎಎಸ್ ಇನ್‌ಸ್ಟಿಟ್ಯೂಟ್ ಸಂಸ್ಥಾಪಕ ಜಿ.ಬಿ. ವಿನಯಕುಮಾರ್, ಶಾಸಕ ಶಿವಗಂಗಾ ಬಸವರಾಜ, ಮೇಯರ್ ವಿನಾಯಕ ಪೈಲ್ವಾನ್, ಮಹಾರಾಜ ಇಂಡಸ್ಟ್ರೀಸ್‌ನ ರವಿರಾಜ, ಕಾಂಗ್ರೆಸ್ ಮುಖಂಡ ದಿನೇಶ್ ಕೆ. ಶೆಟ್ಟಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಸಂಜೆ 4 ಗಂಟೆಗೆ ವಿಶೇಷ ರಥದಲ್ಲಿ ಅಯ್ಯಪ್ಪಸ್ವಾಮಿ ರಥೋತ್ಸವ ಹಾಗೂ ನಂತರ ಮಹಾದೀಪೋತ್ಸವ ನೆರವೇರಲಿದೆ.

ಡಿ.24ರ ಭಾನುವಾರ ಸಂಜೆ 8 ಗಂಟೆಗೆ ನಡೆಯುವ ಪಡಿಪೂಜೆ ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಪಾಲ್ಗೊಳ್ಳಲಿದ್ದಾರೆ. ಪಡಿಪೂಜೆ ನಂತರ ಅನ್ನ ಸಂತರ್ಪಣೆ ನೆರವೇರಲಿದೆ.

ಈ ಸಂದರ್ಭದಲ್ಲಿ 35 ವರ್ಷಗಳಿಗೂ ಹೆಚ್ಚು ಬಾರಿ ಶಬರಿಮಲೆ ಯಾತ್ರೆ ಕೈಗೊಂಡಿರುವ ಹಿರಿಯ ಸ್ವಾಮಿಗಳನ್ನು ಸನ್ಮಾನಿಸಲಾಗುವುದು.

ಕರ್ನಾಟಕದಿಂದ ಶಬರಿಮಲೆಗೆ ತೆರಳುವ ಅಯ್ಯಪ್ಪ ಭಕ್ತರ ವಾಹನಗಳಲ್ಲಿ ಚಿತ್ರ ಹಾಗೂ ಹೂವಿನ ಹಾರ ಹಾಕಿಕೊಂಡಿದ್ದರೆ ಕೇರಳದಲ್ಲಿ 15-20 ಸಾವಿರ ರೂ.ಗಳ ದಂಡ ವಿಧಿಸಲಾಗುತ್ತಿದೆ. ಈ ಬಗ್ಗೆ ಕರ್ನಾಟಕ ಸರ್ಕಾರ ಮಧ್ಯ ಪ್ರವೇಶಿಸಬೇಕು. 

ಶಬರಿಮಲೆಯಲ್ಲಿ ಕರ್ನಾಟಕ ಭವನವನ್ನು ನಿರ್ಮಿಸಿ ಭಕ್ತರಿಗೆ ನೆರವಾಗಬೇಕು ಎಂದು ಚವ್ಹಾಣ್  ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಟ್ರಸ್ಟ್‌ನ ಎಸ್.ಟಿ. ಶಿವಗುರು, ಕೃಷ್ಣ ಎಸ್. ಪೌಠಾಣ್‌ಕರ್, ಆರ್.ಎ. ನವೀನ್ ಕುಮಾರ್, ಎಂ.ಎನ್. ಗೋಪಾಲರಾವ್, ಅಜಯ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!