ಶಾಮನೂರಿನ ಸರ್ಕಾರಿ ಶಾಲೆಗೆ ಕಾಯಕಲ್ಪ

ಇಂದು ಉದ್ಘಾಟನೆ

ದಾವಣಗೆರೆ, ಡಿ. 22 –  ನಗರದ ಬಿಇಎ ಪ್ರೌಢಶಾಲೆಯ ಅಲ್ಯುಮ್ನಿ ಟ್ರಸ್ಟ್ ವತಿಯಿಂದ ನಾಳೆೆ 23 ರಂದು ಬೆಳಿಗ್ಗೆ 10 ಗಂಟೆಗೆ ಶಾಮನೂರಿನ ಜನತಾ ಕಾಲೋನಿಯ ಸರ್ಕಾರಿ ಶಾಲೆಗೆ ಕಾಯಕಲ್ಪ ಮಾಡಲು ಸಮರ್ಪಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಎಸ್.ಟಿ. ವೀರೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಿವೃತ್ತ ಮುಖ್ಯೋಪಾಧ್ಯಾಯ ಕೆ. ಇಮಾಂ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಡಿಡಿಪಿಐ ಜಿ.ಕೊಟ್ರೇಶ್, ದಕ್ಷಿಣ ವಲಯ ಬಿಇಓ ಡಾ. ಪುಷ್ಪಲತಾ, ಮಹಾನಗರ ಪಾಲಿಕೆ ಸದಸ್ಯ ಕಲ್ಲಳ್ಳಿ ನಾಗರಾಜ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಹೆಚ್. ಮಂಜುನಾಥ್, ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ಸುಮಾರಾಣಿ, ಬಿಇಎಹೆಚ್‌ಎಸ್ ಅಲ್ಯುಮ್ನಿ ಟ್ರಸ್ಟ್ ಅಧ್ಯಕ್ಷ ಎಸ್.ಟಿ. ವೀರೇಶ್, ಉಪಾಧ್ಯಕ್ಷ ಡಿ.ಎಸ್. ಹೇಮಂತ್, ಕಾರ್ಯದರ್ಶಿ ಸಂಜಯ್ ಆರ್. ರೇವಣಕರ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

ದಾವಣಗೆರೆ ಬಿಇಎ ಪ್ರೌಢಶಾಲೆಯಲ್ಲಿ 1985 ರಿಂದ 2004 ರೊಳಗಿನ ಹಳೆಯ ವಿದ್ಯಾರ್ಥಿ ಸಂಘದಿಂದ ಟ್ರಸ್ಟ್ ಸ್ಥಾಪಿಸಿ ನೋಂದಾಯಿಸಲಾಗಿದೆ. ಶಿಕ್ಷಣದಿಂದಲೇ ತಮ್ಮ ಭವಿಷ್ಯ ರೂಪುಗೊಂಡಿರುವ ಕಾರಣ ತಮ್ಮ ಸೇವೆಯನ್ನು ಶಿಕ್ಷಣ ಕ್ಷೇತ್ರಕ್ಕೆ ವಿಸ್ತರಿಸಲು ನಿರ್ಧರಿಸಿ, ಶಾಮನೂರಿನ ಜನತಾ ಕಾಲೋನಿಯಲ್ಲಿರುವ ಸರ್ಕಾರಿ ಶಾಲೆಗೆ ಕಾಯಕಲ್ಪ ನೀಡಲು ಮುಂದಾಗಿದೆ ಎಂದು ಹೇಳಿದರು.

ಹಿಂದುಳಿದ ಪ್ರದೇಶದಲ್ಲಿರುವ ಈ ಶಾಲೆಗೆ ಬಣ್ಣ ಬಳಿಸಿ, ಆಕರ್ಷಕ ಗೋಡೆ ಬರಹಗಳನ್ನು ಬರೆಸಿ ಸುಂದರಗೊಳಿಸಲಾಗಿದೆ. ಇದೀಗ ಶಾಲಾ ಆಡಳಿತ ಮಂಡಳಿಗೆ ಬಿಟ್ಟುಕೊಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಡಿ.ಎಸ್. ಹೇಮಂತ್, ಕೆ.ಇ. ವೀರೇಶ್, ವೀರೇಶ್ ಕಿರುವಾಡಿ, ಶ್ರೀನಿವಾಸ್ ಮತ್ತಿತರರು ಇದ್ದರು. 

error: Content is protected !!