ದಾವಣಗೆರೆ, ಡಿ. 19 – ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಾಳೆ ದಿನಾಂಕ 20 ರಂದು ನಗರದ ಕುವೆಂಪು ಕನ್ನಡ ಭವನದಲ್ಲಿ ಮಹಾ ನಗರಪಾಲಿಕೆಯ ‘ಕನ್ನಡದ ಕೃಷಿ ಕರವೇ ಋಷಿ’ ಎಂದು ಮಹಾಪೌರರು, ಆಯುಕ್ತರಿಗೆ ಪೌರ ಸನ್ಮಾನ ಹಾಗೂ ಪೌರಕಾರ್ಮಿಕರಿಗೆ ಪ್ರಶಂಸನಾ ಪತ್ರ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲೇ ದಾವಣಗೆರೆ ಮಹಾನಗರ ಪಾಲಿಕೆಯು ಕನ್ನಡ ಭಾಷಾ ನಾಮಪಲಕ ಕಡ್ಡಾಯ ಎಂಬ ಸರ್ಕಾರದ ಆದೇಶದಂತೆ ಇಲ್ಲದ ಆಂಗ್ಲಫಲಕ ತೆರವುಗೊಳಿಸಿ ಕನ್ನಡ ನಾಮಫಲಕ ಅಳಡಿಸಿರುವ ಪ್ರಥಮ ಪಾಲಿಕೆಯಾಗಿದೆ ಆದ್ದರಿಂದ ನಿಯಮ ಪಾಲಿಸಲು ಸೂಚಿಸಿದ ಪಾಲಿಕೆ ಅಧಿಕಾರಿಗಳು ಹಾಗೂ ಕಾರ್ಯಾಚರಣೆ ನಡೆಸಿದ ಆಡಳಿತ ವರ್ಗಕ್ಕೆ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಅಂದು ಬೆಳಿಗ್ಗೆ 11.30 ಕ್ಕೆ ಜಿಲ್ಲಾಧಿಕಾರಿ ಡಾ|| ಎಂ.ವಿ.ವೆಂಕಟೇಶ್ ಸಮಾರಂಭವನ್ನು ಉದ್ಘಾಟಿಸಲಿದ್ದು, ವೇದಿಕೆ ಜಿಲ್ಲಾ ಗೌರವಾಧ್ಯಕ್ಷರಾದ ವಾಸುದೇವ ರಾಯ್ಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮೇಯರ್ ವಿನಾಯಕ ಪೈಲ್ವಾನ್, ಆಯುಕ್ತರಾದ ರೇಣುಕಾ ಅವರಿಗೆ ಪೌರ ಸನ್ಮಾನ ಮಾಡಲಿದ್ದು, ಆಂಗ್ಲ ನಾಮಫಲಕಗಳಿಗೆ ಮಸಿ ಬಳಿದ ಪೌರಕಾರ್ಮಿಕರಿಗೆ ಉಪ ಮೇಯರ್ ಯಶೋಧ ಹೆಗ್ಗಪ್ಪ ಪ್ರಶಂಸನಾ ಪತ್ರ ವಿತರಣೆ ಮಾಡಲಿದ್ದಾರೆ. ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನ ಕುಮಾರ್ ಆರೋಗ್ಯ ನಿರೀಕ್ಷಕರಿಗೆ ಹಾಗೂ ಮೇಲ್ವಿಚಾರಕರಿಗೆ ಪ್ರಶಂಸನಾ ಪತ್ರ ವಿತರಣೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಮೀನಾಕ್ಷಿ ಎಂ. ಜಗದೀಶ್, ಡಾ.ಚಂದ್ರಮೋಹನ್, ಕರವೇ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಬಸಮ್ಮ ಹಾಗೂ ಎಲ್.ಹೆಚ್.ಸಾಗರ್ ಆಗಮಿಸಲಿದ್ದಾರೆ.
ಸಮಾರಂಭದಲ್ಲಿ 45 ಪೌರಕಾರ್ಮಿಕರು, 22 ಆರೋಗ್ಯ ನಿರೀಕ್ಷಕರು ಹಾಗೂ 42 ಮೇಲ್ವಿಚಾರಕರು ಸೇರಿದಂತೆ ಒಟ್ಟು 110 ಜನರಿಗೆ ಸನ್ಮಾನ ಮಾಡಲಾಗುವುದು ಎಂದು ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಸಮ್ಮ, ವಾಸುದೇವ ರಾಯ್ಕರ್, ಮಂಜುಳಾ, ಗಿರೀಶ್ ಕುಮಾರ್, ಲೋಕೇಶ್, ಜಿ.ಎಸ್ ಸಂತೋಷ್, ಖಾದರ್ ಬಾಷಾ, ಜಬೀವುಲ್ಲಾ, ರಫೀಕ್, ದಾದಾಪೀರ್ ಮತ್ತಿತರರಿದ್ದರು.