ಕ.ರಾ.ರೈ. ರಾಜ್ಯ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಆರೋಪ
ರಾಣೇಬೆನ್ನೂರು, ಡಿ.19- ರೈತರ ಆತ್ಮಹತ್ಯಾ ಪ್ರಕರಣಗಳಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿರುವ ಕೇವಲ ಕೃಷಿ ಸಾಲವಷ್ಟೇ ಕಾರಣವಲ್ಲ, ಮೀಟರ್ ಬಡ್ಡಿ ದರದ ಫೈನಾನ್ಸ್‍ಗಳೂ ಕೂಡಾ ಕಾರಣವಾಗಿವೆ ಎಂದು ರೈತ ಮುಖಂಡ, ಕ.ರಾ.ರೈ. ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಎಫ್. ಪಾಟೀಲ ಆರೋಪಿಸಿದ್ದಾರೆ.
ರೈತರ ಮತ್ತು ಮಧ್ಯಮ ವರ್ಗದವರ, ಕೂಲಿಕಾರರ ಬಂಗಾರದ ಒಡವೆಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದೇ ವೆಂದು ಹೇಳಿ ಮುಗ್ಧರಿಗೆ ವಂಚನೆ ಮಾಡಿರುವ ಮುತ್ತೋ ಟ್, ಮಣಿಪುರಂ, ಐ.ಎಫ್.ಎಲ್, ಕೋಶಮಟ್ಟಂ, ಕೆ.ಎಲ್.ಎಂ. ಮುಂತಾದ ಖಾಸಗಿ ಕಂಪನಿಗಳು ಗೋಲ್ಡ್‍ಲೋನ್ ನೆಪದಲ್ಲಿ ರಾಜ್ಯದ ಸಾಕಷ್ಟು ಜನರನ್ನು ವಂಚನೆ ಮಾಡಿರುವ ಪ್ರಕರಣ ಈ ಹಿಂದೆ ಸದನದಲ್ಲಿ ಚರ್ಚೆಯಾಗಿದ್ದು ಇರುತ್ತದೆ.
ಕೂಡಲೇ ಸರ್ಕಾರ ಆಯಾ ಜಿಲ್ಲೆಯ ಡಿ.ಸಿ ಮತ್ತು ಎಸ್.ಪಿ ನೇತೃತ್ವದಲ್ಲಿ ಒಂದು ವಿಶೇಷ ತಂಡ ರಚಿಸಿ ತನಿಖೆ ನಡೆಸಿ ಮೋಸ ಹೋಗಿರುವ ಅಮಾಯಕರಿಗೆ ಅವರವರ ಬಂಗಾರದ ಒಡವೆಗಳನ್ನು ಮರಳಿಸುವಂತೆ ಮತ್ತು ಪ್ಲಾಟ್ ಬಡ್ಡಿ ದರದಲ್ಲಿ ಹೋಮ್‍ಲೋನ್ ನೀಡಿ ಸಾಕಷ್ಟು ವಂಚನೆ ಮಾಡಿರುವ ಖಾಸಗಿ ಫೈನಾನ್ಸ್‍ಗಳಿಂದ ಮೋಸ ಹೋಗಿರುವ ಅಮಾಯಕರಿಗೆ ನ್ಯಾಯ ಒದಗಿಸುವ ಬಗ್ಗೆ ಸದನದಲ್ಲಿ ಚರ್ಚೆ ನಡೆಸಿ ಸೂಕ್ತ ಕಾನೂನು ರಚಿಸಬೇಕೆಂದು ಒತ್ತಾಯಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳು ಹೌಸಿಂಗ್ ಲೋನ್ ಕೊಡದಿರುವುದನ್ನೇ ಬಂಡವಾಳ ಮಾಡಿ ಕೊಂಡ ಈ ಖಾಸಗಿ ಫೈನಾನ್ಸ್‍ಗಳು, ಗ್ರಾಮೀಣ ಭಾಗಗಳಿಗೆ ದಾಂಗುಡಿ ಇಟ್ಟು ಆರ್ಥಿಕ ಸಂಕಷ್ಟದಲ್ಲಿರುವ ಮುಗ್ಧ ಜನರ ಪರಿಸ್ಥಿತಿಯನ್ನೇ ದುರ್ಲಾಭ ಪಡೆದು ಕಾನೂನು ಬದ್ಧವಾಗಿ ಸಬ್‍ರಿಜಿಸ್ಟಾರ್ ಕಛೇರಿಯಲ್ಲಿ ಆಸ್ತಿ ನೋಂದು ಮಾಡಿಕೊಂಡು ಸಾಲ ನೀಡುವ ಈ ಫೈನಾನ್ಸ್‍ಗಳು ಹೇಳುವ ಬಡ್ಡಿ ದರವನ್ನು ಮುಲಾಜಿಲ್ಲದೆ ವಸೂಲಿ ಮಾಡುತ್ತಿವೆ. ಮಾನ ಮರ್ಯಾದೆಗೆ ಅಂಜಿ ಎಷ್ಟೋ ಜನ ಇವರಿಂದ ಸಾಲ ಪಡೆದವರು ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕಾನೂನು ರಚಿಸಿ, ತನಿಖಾ ತಂಡ ರಚಿಸಿ ನ್ಯಾಯ ಒದಗಿಸಬೇಕೆಂದು ನೊಂದ ಗ್ರಾಹಕರ ಪರವಾಗಿ ರವೀಂದ್ರಗೌಡ ಸರ್ಕಾರ ಮತ್ತು ವಿರೋಧ ಪಕ್ಷದ ನಾಯಕರನ್ನು ಒತ್ತಾಯಿಸಿದ್ದಾರೆ.