ಅಮಾನತ್ತಾದ ಅಧಿಕಾರಗಳ ವರ್ಗಾವಣೆ ಮಾಡದಿದ್ದರೆ ಹೋರಾಟ : ಎಚ್ಚರಿಕೆ

ದಾವಣಗೆರೆ, ಡಿ. 13- ಲೋಕಾ ಯುಕ್ತ ದಾಳಿಗೆ ಬಲಿಯಾಗಿ ಅಮಾನತ್ತು ಗೊಂಡಿದ್ದ ಅಧಿಕಾರಿಗಳು ಜಾಮೀನು ಪಡೆದು ಪುನಃ ಅದೇ ಹುದ್ದೆಗೆ ಬಂದು ಅಧಿಕಾರ ಚಲಾವಣೆ ಮಾಡುತ್ತಿದ್ದಾರೆ. ಈ ಕೂಡಲೇ ಇಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡದಿದ್ದರೆ, ಉಗ್ರ ಹೋರಾಟ ನಡೆಸುವುದಾಗಿ ಸನ್ನದುದಾರ ಡಿ.ಜಿ. ರಘುನಾಥ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕಳೆದ ಸೆ. 13 ರಂದು ದಾವಣಗೆರೆ ಲೋಕಾಯುಕ್ತ ಪೊಲೀಸರಿಂದ ದಾಳಿಗೆ ಒಳಗಾಗಿ ಬಂಧಿತರಾಗಿ, ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದು ಮತ್ತದೇ ಸ್ಥಾನಕ್ಕೆ ಬಂದು ಅಧಿಕಾರ ಚಲಾಯಿಸುತ್ತಿರುವ ಅಬಕಾರಿ ಇಲಾಖೆ ಐವರು ಅಧಿಕಾರಿಗಳನ್ನು ಇನ್ನೂ ಹತ್ತು ದಿನಗಳೊಳಗಾಗಿ ವರ್ಗಾವಣೆ ಮಾಡದಿದ್ದರೆ ಅಬಕಾರಿ ಉಪ ಆಯುಕ್ತರ ಇಲಾಖೆ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಮದ್ಯದಂಗಡಿ ಪರವಾನಿಗೆ ನೀಡಲು ಅಬಕಾರಿ ಉಪ ಆಯುಕ್ತರು ಮತ್ತವರ ಅಧೀನದಲ್ಲಿ ಬರುವ ಅಧಿಕಾರಿಗಳು 60 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ಲೋಕಾಯುಕ್ತರ ನಿರ್ದೇಶನದಂತೆ ಮುಂಗಡ ಹಣ ಮೂರು ಲಕ್ಷ ರೂ. ಗಳನ್ನು ನೀಡುವ ವೇಳೆ ಅಶೋಕ್, ಸ್ವಪ್ನ, ಜೆ.ಕೆ. ಶೀಲಾ, ಶೈಲಶ್ರೀ ಇವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು ಎಂದು ಮಾಹಿತಿ ನೀಡಿದರು.

ಸಾಕ್ಷಿ ನಾಶಪಡಿಸುವ ಸಾಧ್ಯತೆ ಇರುವ ಕಾರಣ ಅವರನ್ನು ಬೇರೆಡೆ ನಾನ್ ಎಕ್ಸಕ್ಯೂಟಿವ್ ಹುದ್ದೆಗೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿದರು. 

ಇದಲ್ಲದೇ ಸರ್ಕಾರ ಲೋಕಾಯುಕ್ತ ದಾಳಿಯಾಗಿ ಅಧಿಕಾರಿಗಳು ಅಮಾನತ್ತು ಆದ ದಿನದಿಂದ (ದಿನಾಂಕ 15 ಅಕ್ಟೋಬರ್ ನಿಂದ ನವೆಂಬರ್ 7 ರವರೆಗೆ) ದಾವಣಗೆರೆ ಅಬಕಾರ ಉಪ ಆಯುಕ್ತರ ಹುದ್ದೆಗೆ ಯಾರನ್ನೂ ನೇಮಕ ಮಾಡದೇ, ಯಾರಿಗೂ ಅಧಿಕಾರಿ ಹಸ್ತಾಂತರ ಮಾಡದೇ ಕಚೇರಿ ಕಾರ್ಯಕಲಾಪಗಳನ್ನು ಸ್ಥಗಿತಗೊಳಿಸಿರುತ್ತಾರೆ. ಇದು ಅನೇಕ ಅನುಮಾನಗಳಿಗೆ ಅವಕಾಶ ಮಾಡಿಕೊಡುತ್ತದೆ ಎಂದರು.

ಸರ್ಕಾರದ ಅಧಿಸೂಚನೆಯಂತೆ ಯಾವುದೇ ಅಧಿಕಾರಿಗಳು, ಸಿಬ್ಬಂದಿ ಲೋಕಾಯುಕ್ತರ ದಾಳಿಗೆ ಒಳಗಾಗಿ ಪ್ರಾಥಮಿಕ ತನಿಖೆಯ ನಂತರ ಆರೋಪ ಗಳು ಮೇಲ್ನೋಟಕ್ಕೆ ಸಾಬೀತಾಗಿ ಆರೋಪಿತರಾಗಿ ಅಮಾನತ್ತಿನಲ್ಲಿ ಇಟ್ಟ ನಂತರ, ಪುನರ್ ಸ್ಥಾಪಿಸುವ ಮುನ್ನ ಲೋಕಾಯುಕ್ತ ಅಧಿಕಾರಿಗಳೊಂದಿಗೆ ಚರ್ಚಿಸಬೇಕೆಂಬ ಆದೇಶವಿದೆ ಎಂದು ಮಾಹಿತಿ ನೀಡಿದರು.

ಆರೋಪಿಗಳ ಪ್ರಭಾವದಿಂದ ಸರ್ಕಾರದ ನೀತಿ, ನಿಯಮಗಳನ್ನು ಗಾಳಿಗೆ ತೂರಿ ಅವರ ಹುದ್ದೆಗಳಿಗೆ ಬೇರೆಯವರನ್ನು ನೇಮಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. 

error: Content is protected !!