ದಾವಣಗೆರೆ, ಡಿ. 12- ಭಗವಂತನನ್ನು ಒಲಿಸಿಕೊಳ್ಳುವಲ್ಲಿ `ಭಕ್ತಿ ಮಾರ್ಗ’ ಅತ್ಯಂತ ಶ್ರೇಷ್ಠವಾದುದು. ಭಕ್ತಿ ಮಾರ್ಗಗಳಲ್ಲಿ ಶ್ರವಣ ಮೊದಲ್ಗೊಂಡು ಒಂಭತ್ತು ವಿಧಗಳನ್ನು ಕಾಣ ಬಹುದು ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ನುಡಿದರು.
ನಿಟುವಳ್ಳಿಯ ಶಿವ ಚಿದಂಬರ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ದೇವನಗರಿ ತಾಲ್ಲೂಕು ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ದಾವಣ ಗೆರೆ ಡಿ-ವಲಯ ಇವರ ಸಂಯುಕ್ತಾಶ್ರಯದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಭಕ್ತಿಮಾರ್ಗದ ಮೂಲಕ ಭಗವಂತನ ಸಾಮೀಪ್ಯಕ್ಕೆ ಹೋಗುವ ಮತ್ತು ಸಾಕ್ಷಾತ್ಕಾರ ಮಾಡಿಕೊಳ್ಳಲು ಭಕ್ತಿಮಾರ್ಗ ಶ್ರೇಷ್ಠ. ಭಕ್ತಿ ಪ್ರೇಮ ಸ್ವರೂಪವಾದುದು. ಪ್ರೀತಿ-ಪ್ರೇಮ ಭಾವವನ್ನು ಭಗವಂತನಲ್ಲಿಟ್ಟರೆ ಅದಕ್ಕೆ ಭಕ್ತಿ ಎನ್ನುತ್ತೇವೆ. ಭಗವಂತನ ಒಲುಮೆ ಪಡೆಯಲು ಭಕ್ತಿ ಮಾರ್ಗ ಸುಲಭವಾದ ಮಾರ್ಗ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಗಳು ಭೌತಿಕ ಬದುಕನ್ನು ರೂಪಿಸಿಕೊಳ್ಳಲು ಧಾರ್ಮಿಕ, ಅಧ್ಯಾತ್ಮಿಕ ನೆಲೆಗಟ್ಟಿನ ಮೇಲೆ ಭಗವಂತನನ್ನು ಒಲಿಸಿಕೊಳ್ಳಲು ಸತ್ಯನಾರಾಯಣ ಸ್ವಾಮಿ ಪೂಜೆ ಮಾಡುತ್ತಿರುವುದು ಉತ್ತಮ ಕಾರ್ಯ ಎಂದು ಹೇಳಿದರು.
ಮಹಾನಗರ ಪಾಲಿಕೆ ಸದಸ್ಯ ಕೆ.ಎಂ. ವೀರೇಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹಿರಿಯ ಜಿಲ್ಲಾ ನಿರ್ದೇಶಕ ಎಂ. ಲಕ್ಷ್ಮಣ್, ಮೋಹನ್ ದೀಕ್ಷಿತ್, ಜಿ.ವಿ. ಮಂಜುಳಾ, ಬಾಲಕೃಷ್ಣ ಮತ್ತಿತರರು ಭಾಗವಹಿಸಿದ್ದರು.