ಹಿರಿಯ ನಟಿ ಲೀಲಾವತಿ ಇನ್ನಿಲ್ಲ

ಹಿರಿಯ ನಟಿ ಲೀಲಾವತಿ ಇನ್ನಿಲ್ಲ

ಬೆಂಗಳೂರು, ಡಿ. 8 – ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರು ವಯೋ ಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.

85 ವರ್ಷದ ನಟಿ ನೆಲ ಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಪುತ್ರ ವಿನೋದ್‌ರಾಜ್‌ರನ್ನು ಅಗಲಿದ್ದಾರೆ. ನೆಲಮಂಗಲದ ಅಂಬೇಡ್ಕರ್ ಮೈದಾನದಲ್ಲಿ ನಾಳೆ ಮಧ್ಯಾಹ್ನದವರೆಗೂ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

1938ರಲ್ಲಿ ದಕ್ಷಿಣ ಕನ್ನಡದ ಬೆಳ್ತಂಗಡಿ ಯಲ್ಲಿ ಜನಿಸಿದ್ದ ಲೀಲಾವತಿ ಅವರು 50 ವರ್ಷಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದರು. ಕನ್ನಡದ 400 ಚಿತ್ರಗಳಲ್ಲದೇ ತಮಿಳು, ತೆಲುಗು ಸೇರಿ 600ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಲೀಲಾವತಿ ಅವರು §ತುಂಬಿದ ಕೊಡ¬, §ಮಹಾ ತ್ಯಾಗ¬, §ಭಕ್ತ ಕುಂಬಾರ¬, §ಗೆಜ್ಜೆ ಪೂಜೆ¬ ಚಿತ್ರಗಳಲ್ಲಿನ ಮನೋಜ್ಞ ಅಭಿನಯದ ಮೂಲಕ ಹೆಸರು ಗಳಿಸಿದ್ದರು. ಜೀವಮಾನ ಸಾಧನೆಗಾಗಿ 1999ರಲ್ಲಿ  ಡಾ. ರಾಜ್‌ಕುಮಾರ್ ಪ್ರಶಸ್ತಿ ಪಡೆದಿ ದ್ದರು. 2008ರಲ್ಲಿ ತುಮಕೂರು ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ನೀಡಿತ್ತು. §ಮದುವೆ ಮಾಡಿ ನೋಡು¬ ಮತ್ತು §ಸಂತ ತುಕಾರಾಮ್¬ ಸಿನಿಮಾಗಳಿಗೆ ಲೀಲಾವತಿ ಅವರು 2 ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಕನ್ನಡ ಚಿತ್ರರಂಗದ ಹೆಸರಾಂತ ನಟಿ ಲೀಲಾವತಿ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ಸಿನಿಮಾದ ನೈಜ ಪ್ರತೀಕ ವಾದ ಅವರು ಹಲವಾರು ಚಲನ ಚಿತ್ರಗಳಲ್ಲಿ ತಮ್ಮ ಬಹುಮುಖ ನಟನೆಯೊಂ ದಿಗೆ ಬೆಳ್ಳಿ ಪರದೆಯನ್ನು ಅಲಂಕರಿಸಿದವರು. ಅವರ ವೈವಿಧ್ಯಮಯ ಪಾತ್ರಗಳು ಮತ್ತು ಅದ್ಭುತ ಪ್ರತಿಭೆಯನ್ನು ಸದಾ ಸ್ಮರಿಸಲಾಗುತ್ತದೆ ಮತ್ತು ಪ್ರಶಂಸಿಸಲಾಗುತ್ತದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು ಎಂದು ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಅಗಲಿಕೆಯ ಸುದ್ದಿ ನೋವುಂಟುಮಾಡಿದೆ. ಹಲವು ದಶಕಗಳ ಕಾಲ ತಮ್ಮ‌ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಲೀಲಾವತಿ ಅವರು ಗುಣಮುಖರಾಗಿ ಇನ್ನಷ್ಟು ಕಾಲ ನಮ್ಮ ನಡುವೆ ಇರುತ್ತಾರೆಂಬ ನನ್ನ ನಂಬಿಕೆ ಹುಸಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ಲೀಲಾವತಿ ಅವರು ಮಹಾಲಿಂಗ ಭಾಗವತರ ಶ್ರೀ ಸತ್ಯ ಸಾಮ್ರಾಜ್ಯ ನಾಟಕದ ಕಂಪನಿಯನ್ನು ಅವರು ಚಿಕ್ಕ ವಯಸ್ಸಿನಲ್ಲೇ ಸೇರಿಕೊಂಡಿದ್ದರು. 1958ರಲ್ಲಿ ಸುಬ್ಬಯ್ಯನಾಯ್ಡು ಅವರ ‘ಭಕ್ತ ಪ್ರಹ್ಲಾದ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ‘ರಾಣಿ ಹೊನ್ನಮ್ಮ’ ಪೂರ್ಣ ಪ್ರಮಾಣದ ನಾಯಕಿಯಾಗಿ ಅವರು ಗಮನ ಸೆಳೆದ ಮೊದಲ ಚಿತ್ರ. ‘ರಣಧೀರ ಕಂಠೀರವ’ ಅವರಿಗೆ ಹೆಸರು ತಂದುಕೊಟ್ಟ ಚಿತ್ರ. 

ಲೀಲಾವತಿ ಅವರ ಮೂಲ ಹೆಸರು ಲೀಲಾ ಕಿರಣ್. 1958 ರಲ್ಲಿ ತೆರೆಕಂಡಿದ್ದ §ಭಕ್ತ ಪ್ರಹ್ಲಾದ’ ಅವರ ಮೊದಲ ಚಿತ್ರ. 2009ರಲ್ಲಿ ಬಿಡುಗಡೆಯಾಗಿದ್ದ ‘ಯಾರದು?’ ಅವರ ಕೊನೆಯ ಚಿತ್ರ.

ಪೋಷಕ ಪಾತ್ರಗಳಲ್ಲೂ ಲೀಲಾವತಿ ಅವರು ಮನೋಜ್ಞವಾಗಿ ಅಭಿನಯಿಸಿದ್ದರು. ಪೋಷಕ ಪಾತ್ರಗಳಲ್ಲಿ ಸುದೀರ್ಘ ಕಾಲ ಅವರು ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದರು. ‘ಡಾಕ್ಟರ್‌ ಕೃಷ್ಣ’ ಸಿನಿಮಾದ ಪೋಷಕ ಪಾತ್ರಕ್ಕೆ ರಾಜ್ಯ ಪ್ರಶಸ್ತಿಯೂ ಸಂದಿತ್ತು. ನಟನೆಯ ಜೊತೆಗೆ ಅವರು ಕನ್ನಡದ ಕೆಲ ಚಿತ್ರಗಳನ್ನೂ ನಿರ್ಮಿಸಿದ್ದರು.

error: Content is protected !!