ಚಿತ್ರದುರ್ಗ, ಡಿ.7- ಪೋಕ್ಸೋ ಕಾಯ್ದೆಯಡಿ ಬಂಧಿತರಾಗಿ, ಇದೀಗ ಷರತ್ತುಬದ್ಧ ಜಾಮೀನಿನ ಮೇಲೆ ಬಿಡು ಗಡೆಯಾಗಿರುವ ಮುರುಘಾ ಮಠದ ಶ್ರೀ ಮುರುಘಾ ಶರಣರು ತಮ್ಮ ಮಠದ ಅಧಿಕಾರವನ್ನು ಮರಳಿ ಪಡೆದಿದ್ದಾರೆ.
ಪೋಕ್ಸೋ ಪ್ರಕರಣದಲ್ಲಿ ಬಂಧಿತ ರಾಗಿದ್ದ ಶರಣರು, 14 ತಿಂಗಳು ಸೆರೆಮನೆ ವಾಸ ಅನುಭವಿಸಿದ್ದರು. ಈ ವೇಳೆ ರಾಜ್ಯ ಸರ್ಕಾರ ಮುರುಘಾ ಮಠದ ಆಡಳಿತ ನಿರ್ವಹಿಸಲು ನಿವೃತ್ತ ಐಎಎಸ್ ಅಧಿಕಾರಿ ವಸ್ತ್ರದ್ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿತ್ತು.
ಈ ನೇಮಕವನ್ನು ಪ್ರಶ್ನಿಸಿ ಮಠದ ಪರ ವಕೀಲರು ಹೈಕೋರ್ಟ್ ಮೊರೆಹೋಗಿದ್ದ ಹಿನ್ನೆಲೆ ಆಡಳಿತಾಧಿಕಾರಿ ನೇಮಕವನ್ನು ಹೈಕೋರ್ಟ್ ರದ್ದುಪಡಿಸಿ, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಿಗೆ ತಾತ್ಕಾಲಿಕವಾಗಿ ಮಠದ ಆಡಳಿತದ ಅಧಿಕಾರ ನೀಡಿತ್ತು. ಹೀಗಾಗಿ ಈವರೆಗೆ ನ್ಯಾಯಾಧೀಶರೇ ಮಠದ ಆಡಳಿತಾಧಿಕಾರಿ ಆಗಿದ್ದರು. ಆದರೆ ನವೆಂಬರ್ 16ರಂದು ಮುರುಘಾಶ್ರೀ ಜಾಮೀನಿನ ಮೇಲೆ ಬಿಡುಗಡೆಯಾದ ಬೆನ್ನಲ್ಲೇ ಮಠದ ಅಧಿಕಾರಕ್ಕಾಗಿ ಹೈಕೋರ್ಟ್ ಮೊರೆ ಹೋಗಿದ್ದು, ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಅಧಿಕಾರ ಹಸ್ತಾಂತರಿಸುವಂತೆ ಚಿತ್ರದುರ್ಗದ ಪ್ರಿನ್ಸಿಪಲ್ ಡಿಸ್ಟ್ರಿಕ್ಟ್ ಮತ್ತು ಸೆಷನ್ಸ್ ಜಡ್ಜ್ಗೆ ಸೂಚಿಸಿತ್ತು. ಅದರಂತೆ ಇದೀಗ ನ್ಯಾಯಾಧೀಶರು ಅಧಿಕಾರ ಹಸ್ತಾಂತರಿಸಿದ್ದಾರೆ.