ಡಿ.3ರಂದು `ನಾರೀ ಶಕ್ತಿ ಸಂಗಮ’ ಮಹಿಳಾ ಸಮ್ಮೇಳನ

ದಾವಣಗೆರೆ, ನ.30- ಮಹಿಳಾ ಸಮನ್ವಯ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆ  ಹಾಗೂ ಸೇವಾ ಭಾರತಿ ಟ್ರಸ್ಟ್  ಸಹಯೋಗದಲ್ಲಿ  ಡಿ. 3ರಂದು ಬೆಳಿಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ನಗರದ ಶ್ರೀ ಅಭಿನವ ರೇಣುಕ ಮಂದಿರದಲ್ಲಿ `ನಾರೀ ಶಕ್ತಿ ಸಂಗಮ’ ಮಹಿಳಾ ಸಮ್ಮೇಳನ  ಆಯೋಜಿಸಲಾಗಿದೆ ಎಂದು ಮಹಿಳಾ ಸಮನ್ವಯದ ಶಿವಮೊಗ್ಗ ವಿಭಾಗದ ಸಂಚಾಲಕಿ ವೀಣಾ ಸತೀಶ್ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. 3ರಂದು ಬೆಳಗ್ಗೆ 9.15ಕ್ಕೆ ಪ್ರದರ್ಶಿನಿ ಯನ್ನು ಪಿಎಸ್‌ಐ ಎಂ.ಆರ್ ಚೌಬೆ  ಹಾಗೂ ಹಿರಿಯ ಸಂಗೀತ ಶಿಕ್ಷಕಿ ವಿಜಯಾ ವೆಂಕಣ್ಣ ಜೋಷಿ ನೆರವೇರಿಸುವರು. ನಂತರ 10.30ಕ್ಕೆ ನಡೆಯುವ ವೇದಿಕೆ ಕಾರ್ಯಕ್ರಮವನ್ನು  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಉದ್ಘಾಟಿಸುವರು. 

`ಭಾರತದ ಚಿಂತನೆಯಲ್ಲಿ ಮಹಿಳೆ’ ವಿಷಯ ಕುರಿತು ಮುಖ್ಯ ವಕ್ತಾರೆ ಹಾಗೂ ಬರಹಗಾರ್ತಿ ವಿಜಯಲಕ್ಷ್ಮಿ ಬಾಳೆಕುಂದ್ರಿ ಮಾತನಾಡುವರು. ಹಿರಿಯ ಪ್ರಸೂತಿ ತಜ್ಞರಾದ ಡಾ.ಶಾಂತಾ ಭಟ್ ಅಧ್ಯಕ್ಷತೆ ವಹಿಸುವರು. ಸೇವಾ ಭಾರತಿ ಟ್ರಸ್ಟ್ ಅಧ್ಯಕ್ಷ ಜಿ.ಎಸ್ ಉಮಾಪತಿ ಉಪಸ್ಥಿತರಿರುವರು ಎಂದರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪನ್ಯಾಸಕಿ ಸುಮತಿ ಜಯಪ್ಪ ಭಾಗವಹಿಸುವರು.  ರಾಷ್ಟ್ರ ಸೇವಿಕಾ ಸಮಿತಿಯ ದಕ್ಷಿಣ ಪ್ರಾಂತ ಸಹ ಬೌದ್ಧಿಕ  ಪ್ರಮುಖೆ ಮೀನಾಕ್ಷಿ ಅಕ್ಕ ಮುಖ್ಯ ವಕ್ತಾರರಾಗಿ ಪಾಲ್ಗೊಳ್ಳುವರು. ಸಂಜೆ 4ಗಂಟೆವರೆಗೆ ಗೋಷ್ಠಿ, ಸಂವಾದ, ಚರ್ಚೆಗಳು ನಡೆಯಲಿವೆ. ನಾರೀ ಶಕ್ತಿ ಸಂಗಮ ಕಾರ್ಯಕ್ರಮದ ಹಿನ್ನೆಲೆಯಲ್ಲಿ  ಡಿ. 1ರಂದು ಸಂಜೆ 5ಗಂಟೆಗೆ ನಗರದಲ್ಲಿ ಬೈಕ್ ರಾಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರದರ್ಶಿನಿಯಲ್ಲಿ ಸ್ವಾತಂತ್ರ್ಯ ಪೂರ್ವ ಹೋರಾಟ ಮಾಡಿದ ವೀರ ಮಹಿಳೆಯರು ಹಾಗೂ ಸ್ವಾತಂತ್ರ್ಯಾ ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕಿಯರ ಚಿತ್ರ ಪ್ರದರ್ಶಿಸಲಾಗುವುದು. ಗೋಷ್ಠಿಯಲ್ಲಿ ಭಾರತೀಯ ಚಿಂತನೆಯಲ್ಲಿ ಮಹಿಳೆ, ಭಾರತದ ವಿಕಾಸದಲ್ಲಿ ಮಹಿಳೆ ಪಾತ್ರ ಮತ್ತು ಮಹಿಳಾ ಸುರಕ್ಷತೆ, ಸ್ವಾವಲಂಬನೆ, ಆರೋಗ್ಯ , ಶಿಕ್ಷಣ ವಿಷಯಗಳ ಬಗ್ಗೆ ವಿಷಯ ತಜ್ಞರು ಮಾತನಾಡುವರು ಎಂದರು. ಮಹಿಳಾ ಸಮನ್ವಯದ ಪ್ರಮುಖರಾದ ಸುಧಾ ಜಯರುದ್ರೇಶ್, ಶೋಭಾ ಕೊಟ್ರೇಶ್, ಜಯಲಕ್ಷ್ಮಿ ಶಶಿಕುಮಾರ್, ಬಿ.ಎಸ್ ಉಮಾಪತಿ ಪತ್ರಿಕಾಗೋಷ್ಠಿಯಲ್ಲಿದ್ದರು.

error: Content is protected !!