ಉಚಿತ ಹಾಗೂ ಸಮಾನ ಶಿಕ್ಷಣ – ಆರೋಗ್ಯ ಸೇವೆಯಿಂದ ಮಾತ್ರ ಸಂವಿಧಾನದ ಆಶಯ ಈಡೇರಿಸಲು ಸಾಧ್ಯ : ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್
ದಾವಣಗೆರೆ, ನ. 28 – ಸರ್ಕಾರ ಬೇರೆಲ್ಲ ಯೋಜನೆಗಳಿಗಿಂತ ಉಚಿತ ಶಿಕ್ಷಣ ಹಾಗೂ ಆರೋಗ್ಯ ಸೇವೆಗೆ ವ್ಯವಸ್ಥೆ ಮಾಡಬೇಕು. ಇದರಿಂದ ಮಾತ್ರ ಸಂವಿ ಧಾನದ ಆಶಯಗಳನ್ನು ಈಡೇರಿಸಲು ಸಾಧ್ಯ ಎಂದು ಹೈಕೋರ್ಟ್ ನ್ಯಾ. ಹೆಚ್.ಪಿ. ಸಂದೇಶ್ ತಿಳಿಸಿದರು.
ಶಿಕ್ಷಣ ಇಲಾಖೆ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮೇ ಸಾಹಿತ್ಯ ಮೇಳ ಬಳಗ, ಸಂವಿಧಾನಕ್ಕಾಗಿ ನಾವು ಹಾಗೂ ಕಾರ್ಯನಿರತ ಪತ್ರಕರ್ತರ ಸಂಘಗಳ ಸಂಯುಕ್ತಾಶ್ರಯದಲ್ಲಿ ನಗರದ ಬಿಐಇಟಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ `ಪ್ರೌಢಶಾಲಾ ಮಕ್ಕಳತ್ತ ಸಂವಿಧಾನ ಅರಿವಿನ ಯಾನ ಹಾಗೂ ಒಂದು ಸಾವಿರ ಮಕ್ಕಳ ಕೈಗೆ ಮಕ್ಕಳಿಗಾಗಿ ಸಂವಿಧಾನ ಕೃತಿ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.
ಜನರ ಬಗ್ಗೆ ಕಾಳಜಿ ಇದ್ದರೆ ಹಾಗೂ ಗಾಂಧೀಜಿ ಕಂಡ ಕಲ್ಯಾಣ ರಾಜ್ಯದ ಕನಸು ನನಸಾಗಬೇಕಾದರೆ ಸಾರ್ವತ್ರಿಕ – ಸಮಾನ ಶಿಕ್ಷಣ ಹಾಗೂ ಸಮಾನ ಆರೋಗ್ಯ ಬೇಕು ಎಂದವರು ಹೇಳಿದರು. ಆದರೆ, ಶಿಕ್ಷಣ ಹಾಗೂ ಆಸ್ಪತ್ರೆಗಳನ್ನು ನಡೆಸುವವರ ಕಪಿಮುಷ್ಠಿಯಲ್ಲಿ ಸರ್ಕಾರ ಗಳಿವೆ. ಈ ಬಗ್ಗೆ ಚಿಂತನೆ ಮಾಡಬೇಕಾದ ಅಗತ್ಯವಿದೆ. ಒಳ್ಳೆಯ ಹಾಗೂ ಸ್ವಾಸ್ಥ್ಯ ಸಮಾಜ ನಿರ್ಮಿಸಲು ಆರೋಗ್ಯ ಹಾಗೂ ಶಿಕ್ಷಣ ಕೊಡಬೇಕು. ಇವೆರಡನ್ನೂ ಕೊಟ್ಟರೆ ಬೇರೆ ಯಾವುದನ್ನೂ ಕೊಡುವ ಅಗತ್ಯ ಬರುವುದಿಲ್ಲ ಎಂದು ನ್ಯಾಯಮೂರ್ತಿ ಹೇಳಿದರು.
ಈಗ ಏನೆಲ್ಲವನ್ನೂ ಉಚಿತವಾಗಿ ಕೊಡುತ್ತೇನೆ ಎನ್ನುತ್ತಾರೆ. ಆದರೆ, ಶಿಕ್ಷಣ ಮಾತ್ರ ಉಚಿತವಾಗಿ ಕೊಡಲು ಮುಂದೆ ಬರುತ್ತಿಲ್ಲ. ಶಿಕ್ಷಣವನ್ನು ಹೂಡಿಕೆ ಮಾಡಿದ್ದಾರೆ, ಶಿಕ್ಷಣವನ್ನು ವಾಣಿಜ್ಯೀಕರಣ ಮಾಡಿದ್ದಾರೆ ಎಂದವರು ಆಕ್ಷೇಪಿಸಿದರು.
ತಂದೆ – ತಾಯಿಗಳೂ ಸಹ ಮಕ್ಕಳ ಶಿಕ್ಷಣಕ್ಕಾಗಿ ಹೂಡಿಕೆ ಮಾಡಬೇಕು, ಮಕ್ಕಳಿಗೆ ಕೆಲಸ ಸಿಕ್ಕ ನಂತರ ಆ ಹೂಡಿಕೆ ವಾಪಸ್ ಪಡೆಯಬೇಕು ಎಂಬ ಪರಿಸ್ಥಿತಿ ಇದೆ. ಈ ರೀತಿಯ ಶಿಕ್ಷಣ ವ್ಯವಸ್ಥೆ ಕಾರಣದಿಂದ ನಾವು ಜನರಿಂದ ಸೇವೆ ಪಡೆಯುವುದು ಕಷ್ಟವಾಗುತ್ತಿದೆ ಎಂದು ನ್ಯಾಯಮೂರ್ತಿ ಹೇಳಿದರು.
ಶಾಸಕಾಂಗ ರೂಪಿಸುವ ಯಾವುದೇ ಕಾಯ್ದೆಯು ಸಂವಿಧಾನದ ವ್ಯಾಪ್ತಿಯಲ್ಲಿರ ಬೇಕು ಹಾಗೂ ಸಂವಿಧಾನದ ಆಶಯಗಳಿಗೆ ಅನುಗುಣವಾಗಿರಬೇಕು. ಹೀಗಾಗಿ ಸಂವಿಧಾನ ಒಂದು ರೀತಿಯಲ್ಲಿ ಕಾನೂನುಗಳ ತಾಯಿ ಇದ್ದಂತೆ ಎಂದೂ ನ್ಯಾಯಮೂರ್ತಿ ಸಂದೇಶ್ ಇದೇ ಸಂದರ್ಭದಲ್ಲಿ ತಿಳಿಸಿದರು.
ಭಾರತ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಸಂವಿಧಾನ ಕಟ್ಟುಪಾಡಿನಲ್ಲಿ ವ್ಯವಸ್ಥೆ ಇರುವ ಕಾರಣದಿಂದಾಗಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿರಲು ಸಾಧ್ಯವಾಗಿದೆ ಎಂದವರು ಹೇಳಿದರು.
ಸಂವಿಧಾನದ ಆಶಯದಂತೆ ಕಾನೂನುಗಳನ್ನು ರೂಪಿಸಿದರಷ್ಟೇ ಸಾಲದು. ಆ ಕಾನೂನುಗಳನ್ನು ಜಾರಿಗೆ ತರುವ ಇಚ್ಛಾಶಕ್ತಿಯನ್ನು ತೋರಬೇಕಿದೆ ಎಂದು ನ್ಯಾಯಮೂರ್ತಿ ಹೇಳಿದರು.