ಮಲೇಬೆನ್ನೂರು,ನ.27- ಕೊಕ್ಕನೂರಿನಲ್ಲಿ ಇಂದು ಶ್ರೀ ಪುಷ್ಪಗಿರಿ ಸ್ವ-ಸಹಾಯ ಸಂಘಗಳ ಹರಿಹರ ತಾಲ್ಲೂಕು ಮಟ್ಟದ ಸಮಾವೇಶ ಮತ್ತು ಗುರುವಂದನಾ ಕಾರ್ಯಕ್ರಮ ವನ್ನು ನಾಳೆ ದಿನಾಂಕ 28ರ ಮಂಗಳವಾರ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಿಇಓ ನಾಗಯ್ಯ ತಿಳಿಸಿದರು.
ಶನಿವಾರ ಇಲ್ಲಿನ ನೀರಾವರಿ ಇಲಾಖೆಯ ಆವರಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದಿನ ಸಮಾವೇಶವನ್ನು ಶ್ರೀ ಕ್ಷೇತ್ರ ಪುಷ್ಪಗಿರಿ ಮಹಾಸಂಸ್ಥಾನದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಲಿದ್ದು, ಯಲವಟ್ಟಿಯ ಶ್ರೀ ಗುರು ಸಿದ್ಧಾಶ್ರಮದ ಶ್ರೀ ಯೋಗಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.
ಈ ಸಮಾವೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಮಾಜಿ ಶಾಸಕರು ಸೇರಿದಂತೆ ಇತರೆ ಗಣ್ಯರಿಗೂ ಆಹ್ವಾನ ನೀಡಲಾಗಿದೆ. 40ಕ್ಕೂ ಹೆಚ್ಚು ಸ್ವ-ಸಹಾಯ ಸಂಘಗಳ ಸುಮಾರು 2 ಸಾವಿರ ಮಹಿಳಾ ಸದಸ್ಯರು ಮತ್ತು ಪುಷ್ಪಗಿರಿ ಮಠದ ಭಕ್ತರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ರಾಜ್ಯದಲ್ಲೇ ಪ್ರಥಮ ಬಾರಿಗೆ ಪುಷ್ಪಗಿರಿ ವಿದ್ಯಾರ್ಥಿಗಳ ಸಂಘ ಮತ್ತು ಯುವ ರೈತರ ಸಂಘಗಳನ್ನು ಸಮಾವೇಶದಲ್ಲಿ ಉದ್ಘಾಟಿಸಲಿದ್ದು, ಕುಕ್ಕುವಾಡ ಮತ್ತು ಕೊಕ್ಕನೂರಿನಲ್ಲಿ ಈ ಸಂಘಗಳನ್ನು ಈಗಾಗಲೇ ರಚಿಸಲಾಗಿದೆ.
ಈ ಸಂಘಗಳ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ರೈತರಿಗೆ ಅಗತ್ಯ ಮಾಹಿತಿ, ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶ ಹೊಂದಿದ್ದೇವೆ ಎಂದು ನಾಗಯ್ಯ ಹೇಳಿದರು.
2020 ಜನವರಿ 4 ರಂದು ಪ್ರಾರಂಭಗೊಂಡ ಪುಷ್ಪಗಿರಿ ಗ್ರಾಮಾಭಿವೃದ್ಧಿ ಸಂಸ್ಥೆಯು ಪ್ರಸ್ತುತ ರಾಜ್ಯದ 9 ಜಿಲ್ಲೆಗಳಲ್ಲಿ 1728 ಸ್ವ-ಸಹಾಯ ಸಂಘಗಳನ್ನು ಮತ್ತು 34,540 ಮಹಿಳಾ ಸದಸ್ಯರನ್ನು ಹೊಂದಿದೆ. 2024ರ ಜನವರಿ 2 ರಂದು ಶಿಕಾರಿಪುರದಲ್ಲಿ ರಾಜ್ಯಮಟ್ಟದ ಸಮಾವೇಶವನ್ನೂ ಹಮ್ಮಿಕೊಂಡಿದ್ದೇವೆ.
ಕೊಕ್ಕನೂರಿನ ಪವನ ದೇವ ಕಲ್ಯಾಣ ಮಂಟಪದಲ್ಲಿ ಇಂದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಂಡಿರುವ ಈ ಸಮಾವೇಶಕ್ಕೆ ನಮ್ಮ ಸಂಘಗಳ ಸದಸ್ಯರು ಈಗಾಗಲೇ ಹರಿಹರ ತಾಲ್ಲೂಕಿನ ಪ್ರತಿ ಹಳ್ಳಿಯಲ್ಲೂ ಹೆಣ್ಣು ಮಕ್ಕಳಿಗೆ ಅರಿಶಿಣ-ಕುಂಕುಮ ನೀಡಿ, ಆಮಂತ್ರಣ ನೀಡುತ್ತಿದ್ದಾರೆ ಎಂದು ತಿಳಿಸಿದ ನಾಗಯ್ಯ ಅವರು, ನಮ್ಮ ಸಂಘಗಳ ರಚನೆ, ಸಮಾವೇಶ ಯಾವ ಯೋಜನೆಯ ವಿರುದ್ಧವೂ ಅಲ್ಲ ಎಂದು ಸ್ಪಷ್ಪಪಡಿಸಿದರು.
ಈ ಸಮಾವೇಶಕ್ಕೆ ನಂದಿಗುಡಿ ಶ್ರೀಗಳಿಗೂ ಆಹ್ವಾನ ನೀಡಲಾಗಿತ್ತು. ಆದರೆ, ಅವರು ನಮ್ಮ ಆಹ್ವಾನವನ್ನು ನಿರಾಕರಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿದ್ದ ಸಮಾಜದ ಹಿರಿಯರು ತಿಳಿಸಿದರು.
ನೊಳಂಬ ವೀರಶೈವ ಸಮಾಜದ ಮುಖಂಡರಾದ ಬಿ.ವೀರಯ್ಯ, ಜಿ.ಬೇವಿನಹಳ್ಳಿಯ ಬಿ.ಕೆ.ಮಹೇಶ್ವರಪ್ಪ, ಬಸಾಪುರದ ಕುಬೇರಸ್ವಾಮಿ, ಜಿಗಳಿಯ ಎಂ.ವಿ.ನಾಗರಾಜ್, ಜಿ.ಪಿ.ಹನುಮಗೌಡ, ಗುಡ್ಡೇಹಳ್ಳಿ ವೀರನಗೌಡ, ಕೆಂಚಿಕೊಪ್ಪದ ಗಿರೀಶ್ ಗಂಗೂರು ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.