ಪಾಲಿಕೆ: ಇಂದಿನಿಂದ ಮೂರು ದಿನ ರಾಜ್ಯೋತ್ಸವ

ಅದ್ಧೂರಿ ಆಚರಣೆ ಪ್ರತಿ ದಿನ ಸಂಜೆ ರಸಮಂಜರಿ 105 ಸಾಧಕರಿಗೆ ಸನ್ಮಾನ

ದಾವಣಗೆರೆ, ನ.24- ಮಹಾನಗರ ಪಾಲಿಕೆ, ಕನ್ನಡ ಪರ ಸಂಘ-ಸಂಸ್ಥೆಗಳು ಹಾಗೂ ಪತ್ರಕರ್ತರ ಸಂಯುಕ್ತಾಶ್ರಯದಲ್ಲಿ 68ನೇ ಕರ್ನಾಟಕ ರಾಜ್ಯೋತ್ಸವವನ್ನು ಇದೇ ನ.25ರಿಂದ  ಮೂರು ದಿನಗಳ ಕಾಲ ಪಾಲಿಕೆ ಆವರಣದಲ್ಲಿರುವ ಶ್ರೀಮತಿ ರಾಧಮ್ಮ ಚನ್ನಗಿರಿ ರಂಗಪ್ಪ ಸ್ಮಾರಕ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಹಾನಗರ ಪಾಲಿಕೆ ಸದಸ್ಯ ಎ.ನಾಗರಾಜ್ ತಿಳಿಸಿದ್ದಾರೆ.

ಪಾಲಿಕೆಯ ಮೇಯರ್ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ನ.25ರ ಇಂದು ಬೆಳಿಗ್ಗೆ 9.30ಕ್ಕೆ ಮೇಯರ್ ವಿನಾಯಕ್ ಪೈಲ್ವಾನ್ ಕನ್ನಡ ಧ್ವಜಾರೋಹಣ ನೆರವೇರಿಸಲಿದ್ದಾರೆ. ನಂತರ ಪಾಲಿಕೆ ಆವರಣದಿಂದ ಕನ್ನಡ ತಾಯಿ ಶ್ರೀ ಭುವನೇಶ್ವರಿಯ ಭವ್ಯ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಚಾಲನೆ ನೀಡಲಿದ್ದಾರೆ ಎಂದರು.

ಸಂಜೆ 5.30ಕ್ಕೆ ನಡೆಯುವ ವೇದಿಕೆ ಕಾರ್ಯಕ್ರಮವನ್ನು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಉದ್ಘಾಟಿಸಲಿದ್ದು, ಶಾಸಕ ಶಾಮನೂರು ಶಿವಶಂಕಪ್ಪ ಕನ್ನಡ ತಾಯಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಮೇಯರ್ ವಿನಾಯಕ ಪೈಲ್ವಾನ್ ಅಧ್ಯಕ್ಷತೆ ವಹಿಸಲಿದ್ದು, ನಿವೃತ್ತ ಪ್ರಾಧ್ಯಾಪಕ ಡಾ|| ಭಿಕ್ಷಾವರ್ತಿಮಠ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದರು.

ನ.26ರ ಸಂಜೆ 5.30ಕ್ಕೆ ನಡೆಯುವ ಕಾರ್ಯಕ್ರಮವನ್ನು ಸಂಸದ ಜಿ.ಎಂ.ಸಿದ್ದೇಶ್ವರ ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯ ಕೆ.ಅಬ್ದುಲ್ ಜಬ್ಬಾರ್ ಸಾಬ್ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಕನ್ನಡ ಅಧ್ಯಾಪಕ ವಿಜಯ ಸೊಲ್ಲಾಪುರ ವಿಶೇಷ ಉಪಾನ್ಯಾಸ ನೀಡಲಿದ್ದಾರೆ ಎಂದರು.

ನ.27ರ ಸಂಜೆ 5.30ಕ್ಕೆ ನಡೆಯುವ ಕಾರ್ಯಕ್ರಮವನ್ನು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ ಉದ್ಘಾಟಿಸಲಿದ್ದು, ಶಾಸಕ ಶಾಮನೂರು ಶಿವಶಂಕಪ್ಪ ಕನ್ನಡ ತಾಯಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಸಾಹಿತಿ ಡಾ.ರಂಜಾನ್ ದರ್ಗಾ, ಧರ್ಮಗುರು ಜೈನಿ ಉಸ್ತಾದ್ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. 

ಇದೇ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಕ್ರೀಡಾಪಟು ಹಾಗೂ ಪಾಲಿಕೆ ಸದಸ್ಯ ಜೆ.ಎನ್.ಶ್ರೀನಿವಾಸ್ ಮತ್ತು ನಿವೃತ್ತ ಪಾಲಿಕೆ ಆಯುಕ್ತ ಬಿ.ಹೆಚ್.ನಾರಾಯಣಪ್ಪ ಅವರಿಗೆ ಗೌರವ ಅಭಿನಂದನೆ ಸಲ್ಲಿಸಲಾಗುವುದು.

ಮೂರು ದಿನಗಳ ಕಾರ್ಯಕ್ರಮಕ್ಕೂ ಮುನ್ನ ಸ್ಥಳೀಯ ಹಾಗೂ ವಿವಿಧ ನಗರಗಳ ತಂಡಗಳಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ನಾಗರಾಜ್ ಹೇಳಿದರು. ಪ್ರತಿದಿನ ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಒಟ್ಟು 105 ಸಾಧಕರಿಗೆ ಸನ್ಮಾನ ಮಾಡಲಾಗುವುದು ಎಂದು ಹೇಳಿದರು. 

ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಮೇಯರ್ ವಿನಾಯಕ್ ಪೈಲ್ವಾನ್, ಪಾಲಿಕೆ ಸದಸ್ಯರಾದ ಮಂಜುನಾಥ್ ಗಡಿಗುಡಾಳ್, ಅಬ್ದುಲ್ ಲತೀಫ್, ಜಾಕೀರ್ ಅಲಿ, ಸೋಗಿ ಶಾಂತಕುಮಾರ್, ಚಮನ್ ಸಾಬ್ ಇತರರು ಇದ್ದರು.

error: Content is protected !!