ದಾವಣಗೆರೆ, ನ.24- ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿ, ಅತ್ಯಾಚಾರ ಮಾಡಿದ ಆರೋಪಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 20 ವರ್ಷ ಶಿಕ್ಷೆ ಹಾಗೂ 17 ಸಾವಿರ ರೂ. ದಂಡ ವಿಧಿಸಿದೆ. ಸಾದಿಕ್ ಅಲಿ ಎಂಬಾತ ಅಪ್ರಾಪ್ತಳಾದ ನನ್ನ ಮಗಳನ್ನು ಮದುವೆಯಾಗು ತ್ತೇನೆಂದು ಪುಸಲಾಯಿಸಿ ಬಲವಂತವಾಗಿ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದು, ಆತನ ವಿರುದ್ಧ ಕ್ರಮ ಜರುಗಿಸಿ ನ್ಯಾಯ ದೊರಕಿಸಿಕೊಡುವಂತೆ 2020ರ ಜೂನ್ 29ರಂದು ಹರಿಹರ ತಾಲ್ಲೂಕಿನ ಮಹಿಳೆ ದೂರು ನೀಡಿದ್ದರು.
ತನಿಖಾಧಿಕಾರಿಯಾಗಿದ್ದ ಹರಿಹರ ವೃತ್ತ ನಿರೀಕ್ಷಕ ಶಿವಪ್ರಸಾದ್ ಎಂ. ಪ್ರಕರಣದ ತನಿಖೆ ಪೂರೈಸಿ ದೋಷಾರೋಪಣಾ ಪಟ್ಟಿ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ-1, ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶ ಎನ್. ಶ್ರೀಪಾದ ಇವರು ನ.22ರಂದು ಆರೋಪಿತನಿಗೆ ಶಿಕ್ಷೆ ವಿಧಿಸಿದ್ದು, ಸಂತ್ರಸ್ಥೆಗೆ 5 ಲಕ್ಷ ಸರ್ಕಾರದಿಂದ ಪರಿಹಾರ ನೀಡಲು ಆದೇಶ ಹೊರಡಿಸಿದ್ದಾರೆ. ಪಿರ್ಯಾದು ಪರವಾಗಿ ಸರ್ಕಾರಿ ವಕೀಲರಾದ ಸುನಂದ ಮಡಿವಾಳ ನ್ಯಾಯ ಮಂಡಿಸಿದ್ದರು.