ಕಾಂತರಾಜ್ ವರದಿ ಕೈ ಬಿಡಲು ಒತ್ತಾಯ

ದಾವಣಗೆರೆ, ನ.24- ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯ ಕಾಂತರಾಜು ವರದಿ ಅವೈಜ್ಞಾನಿಕವಾಗಿದ್ದು, ಅದನ್ನು ಕೂಡಲೇ ಕೈಬಿಟ್ಟು, ನೂತನವಾಗಿ ಸಮೀಕ್ಷೆ ನಡೆಸುವಂತೆ ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಜಿ. ಶಿವಯೋಗಪ್ಪ ಒತ್ತಾಯಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಕಾಂತರಾಜು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ಯಾರ ಮನೆಗೂ ಭೇಟಿ ನೀಡಿಲ್ಲ. ಎಲ್ಲೋ ಕೆಲ ಮನೆಗಳಿಗೆ ಮಾತ್ರ ಭೇಟಿ ನೀಡಿ ಅವೈಜ್ಞಾನಿಕ ವರದಿ ತಯಾರಿಸಲಾಗಿದೆ. ಎಲ್ಲ ಸಮುದಾಯದ ವರನ್ನು ನಿರ್ಲಕ್ಷಿಸಿ ತಮಗೆ ಬೇಕಾದಂತೆ ಕಾಂತ ರಾಜು ಮೂಲಕ ಜನಪ್ರತಿನಿಧಿಗಳು ವರದಿ ಸಿದ್ಧಪಡಿಸಿದ್ದಾರೆ ಎಂದು ಆರೋಪಿಸಿದರು.

2015ರಲ್ಲಿ ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ವರದಿ ಸಿದ್ಧಪಡಿಸಲಾಗಿತ್ತು. ಆ ಅವಧಿಯಲ್ಲೇ ವರದಿ ಅಂಗೀಕರಿಸದೇ ಈಗ ವರದಿ ಅಂಗೀಕರಿಸಲು ಉತ್ಸಾಹ ತೋರುತ್ತಿದ್ದಾರೆ. ಇದು ಗೊಂದಲ ಮೂಡಿಸುತ್ತಿದೆ.  ನ್ಯಾಯಸಮ್ಮತವಾದ ವರದಿ ಸಿದ್ಧಪಡಿಸಬೇಕು ಎಂದು ಒತ್ತಾಯಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರೂ ವರದಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅವರನ್ನು ತಾಲ್ಲೂಕು ಘಟಕ ಬೆಂಬಲಿಸುತ್ತದೆ. ಕೂಡಲೇ ಕಾಂತರಾಜು ವರದಿ ಕೈಬಿಟ್ಟು ಹೊಸ ವರದಿ ಸಿದ್ಧಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಮಹಾಸಭಾದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಕಟ್ಟಿಮನಿ, ಉಪಾಧ್ಯಕ್ಷ ಶಿವಮೂರ್ತಿಸ್ವಾಮಿ, ಹಾಲೇಶ್‌ ಕಾಯಿಪೇಟೆ ಪತ್ರಿಕಾಗೋಷ್ಠಿಯಲ್ಲಿದ್ದರು.

error: Content is protected !!