ಸಂವಿಧಾನ ಜನ ಸಂಕಲ್ಪದ ಅಭಿವ್ಯಕ್ತಿಯ ದಾಖಲೆ

ನಗರದಲ್ಲಿ ಇಂದು ಪ್ರೌಢಶಾಲಾ ಮಕ್ಕಳತ್ತ  ಸಂವಿಧಾನ ಅರಿವಿನ ಯಾನ ಕಾರ್ಯಕ್ರಮ  

ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಾರ್ವಭೌಮತ್ವದ ಅಧಿಕಾರ ದೇಶದ ಸಮಸ್ತ ಜನತೆಯದೇ ಆಗಿರುತ್ತದೆ. ಭಾರತದ ಸಂವಿಧಾನ ಮತ್ತು ಅದರ ವಿಧಿನಿಯಮಗಳು ದೇಶದ ಜನತೆಯು,ದೇಶದ ಜನತೆಗೆ ಅರ್ಪಿಸಿಕೊಂಡದ್ದು,We the people of India ಎಂದು ಆರಂಭವಾಗುವ ಸಂವಿಧಾನವು ಜನರ ಸಂಕಲ್ಪದ ಅಭಿವ್ಯಕ್ತಿಯ ದಾಖಲೆಯಾಗಿದೆ.

ಸಂವಿಧಾನ – ಕೇವಲ ಹಿಂದೂಗಳದಲ್ಲ, ಮುಸಲ್ಮಾನರದ್ದಲ್ಲ, ಕ್ರೈಸ್ತ, ಜೈನರದ್ದಲ್ಲ ಅಥವಾ ಬೇರಾ ವುದೋ ಮತಧರ್ಮದವರದ್ದೋ  ಜಾತಿಯವರದ್ದೋ ಅಲ್ಲ.

ಭಾರತದ ಸಂವಿಧಾನ ಎಲ್ಲರದ್ದು. ಸಂವಿಧಾನಕ್ಕೆ ಈ ದೇಶದ ಜನತೆಯಾದ  ನಮ್ಮ ನಿಷ್ಟೆ ಪ್ರಥಮ ಮತ್ತು ಪರಮ ಆದ್ಯತೆಯಾಗಬೇಕು. ವರ್ತಮಾನ ಭಾರತದಲ್ಲಿ, ದ್ವೇಷದಿಂದ ದೇಶ ಕಟ್ಟಲು ಸಾಧ್ಯವಿಲ್ಲ. ದ್ವೇಷ , ಬಿಟ್ಟು, ದೇಶ ಕಟ್ಟು, ಎಂಬುದು ನಮ್ಮ ಮನದ ಮಾತಾಗಬೇಕಿದೆ.

ಭಾರತದ ಸಂವಿಧಾನಕ್ಕೆ ಅಂತಿಮ ಸ್ಪರ್ಶ ನೀಡಿದ ನವೆಂಬರ್ 25ನೇ ತಾರೀಖು, ಭಾರತದ ಮಟ್ಟಿಗೆ ಬಹು ಅಮೂಲ್ಯವಾದ ದಿನ. ಈ ಹಿನ್ನೆಲೆಯಲ್ಲಿ ದಿನಾಂಕ 25.11.2023ರ  ಶನಿವಾರ ಬೆಳಿಗ್ಗೆ 9.30 ಕ್ಕೆ ದಾವಣಗೆರೆ ನಗರದ ಬಿ.ಐ.ಇ.ಟಿ. ಕಾಲೇಜಿನ ಎಸ್.ಎಸ್.ಮಲ್ಲಿಕಾರ್ಜುನ ಸಾಂಸ್ಕೃತಿಕ ಸಭಾಂಗಣದಲ್ಲಿ ಪ್ರೌಢಶಾಲಾ ಮಕ್ಕಳತ್ತ  ಸಂವಿಧಾನ ಅರಿವಿನ ಯಾನ ಕಾರ್ಯಕ್ರಮ ನಡೆಯಲಿದೆ. ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘದ  ಹಾಗೂ ಈಗಾಗಲೇ ನಾಡಿಗೆ ವೈಚಾರಿಕ ಬೆಳಕನ್ನು ಪಸರಿಸುವ ಮೂಲಕ ಹೆಸರಾದ ಮೇ ಸಾಹಿತ್ಯ ಬಳಗ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಸಂವಿಧಾನಕ್ಕಾಗಿ ನಾವು ಸಂಘಟನೆಗಳು ಸೇರಿ ಈ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ.

ಗೌರವಾನ್ವಿತ ಉಚ್ಚನ್ಯಾಯಾಲಯದ ನ್ಯಾಯ ಮೂರ್ತಿ ಹೆಚ್.ಪಿ. ಸಂದೇಶ್ ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ಕಾರ್ಯಕ್ರಮದಲ್ಲಿ ಸಂವಿಧಾನ ಕುರಿತು ವಿಶೇಷ ಉಪನ್ಯಾಸ ನೀಡುವುದಲ್ಲದೆ, ಹಾಜರಿರುವ ಸಾವಿರಕ್ಕೂ ಹೆಚ್ಚು ಮಕ್ಕಳೊಂದಿಗೆ ಸಂವಾದಿಸುವರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ  ಶ್ರೀಮತಿ ರಾಜೇಶ್ವರಿ ಎನ್. ಹೆಗಡೆ ಅವರು ಅಧ್ಯಕ್ಷತೆ ವಹಿಸುವರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಕೊಟ್ರೇಶ, ಜಿಲ್ಲಾ ಕಾ.ಸೇ. ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣಕುಮಾರ್, ಹಿರಿಯ ಚಿಂತಕ ಬಿ.ಎಮ್.ಹನುಮಂತಪ್ಪ, ಕರ್ನಾಟಕ ಕಾರ್ಯನಿರತ ಪತ್ರಕರ್ತರ  ಸಂಘದ ಜಿಲ್ಲಾಧ್ಯಕ್ಷ  ಇ.ಎಂ. ಮಂಜುನಾಥ, ಪ್ರಧಾನ ಕಾರ್ಯದರ್ಶಿ ಎ.ಫಕೃದ್ದೀನ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸುವರು.

ನಮ್ಮ ಪ್ರಜಾಪ್ರಭುತ್ವವು ಅಹಿಂಸಾ ಪಥ ಭ್ರಷ್ಟ ಆಗದಂತೆ ಕಾಯುವುದಕ್ಕೆ, ಕಾಪಾಡಿಕೊಳ್ಳುವುದಕ್ಕೆ, ನಾಡಿನೆಲ್ಲೆಡೆ ಇಂತಹ ಕಾರ್ಯಕ್ರಮಗಳ ಮೂಲಕ ಬೆಳಕನ್ನು ಪಸರಿಸುವ ಕೆಲಸ ಮಾಡುತ್ತಿರುವ ಲಡಾಯಿ ಪ್ರಕಾಶನದ ಬಸೂ, ಮೇ ಸಾಹಿತ್ಯ ಮೇಳ ರೂವಾರಿಗಳು, ನಾಡಿನ ಚಿಂತಕರಾದ ಬಸವರಾಜ ಸೂಳಿಬಾವಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.

ದೇಶದಲ್ಲಿ ಇರುವ ಎಲ್ಲರೂ ಪರಸ್ಪರ ಪ್ರೀತಿ, ಸೌಹಾರ್ದ, ಸಮಭಾವದಲ್ಲಿ ಸ್ವತಂತ್ರವಾಗಿ ಬಾಳುವುದು ಎಲ್ಲರೂ ಕ್ಷೇಮಕ್ಕಾಗಿ ಬಾಳುವುದು, ದುಡಿಯುವುದು, ಹಾರೈಸುವುದು ಮುಖ್ಯ. ಇಂತಹ ವಿಷಯಗಳನ್ನು ಅತ್ಯಂತ ಸರಳವಾಗಿ, ಮಕ್ಕಳಿಗೆ ಅರ್ಥವಾಗುವ ಹಾಗೆ ಮಹಿಳಾ ಒಕ್ಕೂಟದ ಸದಸ್ಯೆ, ಕಲಾವಿದೆ, ನಟಿ, ಲೇಖಕಿ ಬಹುಮುಖ ಪ್ರತಿಭೆ ವಾಣಿ ಪೆರಿಯೋಡಿ ಬರೆದ `ಮಕ್ಕಳಿಗಾಗಿ ಸಂವಿಧಾನ’ ಕೃತಿಯನ್ನು ಅಂದು ಹಾಜರಿರುವ ಎಲ್ಲಾ ಮಕ್ಕಳಿಗೂ (1200 ರಿಂದ 1300) ಉಚಿತವಾಗಿ ಹಂಚಲು ನಾಡಿನ ಹಲವಾರು ಮನಸ್ಸುಗಳು ಮುಂದೆ ಬಂದಿವೆ.

ನಮ್ಮ ದೇಶದ ಸಂವಿಧಾನವೇ ನಮ್ಮ ಧರ್ಮ, ನಮ್ಮ ಆದರ್ಶ, ನಮ್ಮ ಮಾರ್ಗದರ್ಶಕ, ಅದೇ ನಮಗೆ ಪ್ರಥಮ ಅದೇ ನಮಗೆ ಪ್ರಧಾನ ಎಂದು ಭಾವಿಸಿರುವ ನ್ಯಾಯಾಂಗ, ಕಾರ್ಯಾಂಗ ಮತ್ತು ಮಾಧ್ಯಮ ರಂಗಗಳು ಸೇರಿ ಆಯೋಜಿಸಿರುವ ಈ ಕಾರ್ಯಕ್ರಮವು ಕರ್ನಾಟಕದಲ್ಲಿ ಈಗಾಗಲೇ ಐತಿಹಾಸಿಕ ಆರಂಭವನ್ನು ದಾವಣಗೆರೆ ಯಿಂದಲೇ ಪಡೆ ದುಕೊಂಡಿದೆ. ಕರ್ನಾಟಕದ ಇತರ ಭಾಗಗಳಲ್ಲಿ ಯೂ ಜನರಿಂದ ಜನರಿಗಾಗಿಯೇ ಇಂತಹ ಕಾರ್ಯ ಕ್ರಮಗಳನ್ನು ನಡೆಸಲು ಮುಂದೆ ಬರುತ್ತಿರುವುದು, ಭಾರತದ ಸಂವಿಧಾನ ನಮ್ಮೆಲ್ಲರ ಬಾಳ್ವೆಗೆ ಅಗತ್ಯವಾದ ಮನೋಧರ್ಮವನ್ನು ರೂಪಿಸುವ ಜೀವತತ್ವವಾಗಿದೆ ಎಂಬುದನ್ನು ಮತ್ತೆ ಮತ್ತೆ ನೆನಪಿಸುವ ವಿಶೇಷ ಕಾರ್ಯಕ್ರಮವಾಗಿದೆ.


– ಬಿ. ಶ್ರೀನಿವಾಸ್‌, ಜಿಲ್ಲಾ ನ್ಯಾಯಾಲಯ, ದಾವಣಗೆರೆ.

error: Content is protected !!