ಕೋಳಿ ಸಾಕಾಣಿಕೆದಾರರ ರಕ್ಷಣೆಗೆ ಸರ್ಕಾರ ಧಾವಿಸಲು ಆಗ್ರಹ

ದಾವಣಗೆರೆ, ನ.21- ಸರ್ಕಾರವು ಕೋಳಿ ಸಾಕಾಣಿಕೆದಾರರ ರಕ್ಷಣೆಗೆ ಧಾವಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ಕರ್ನಾಟಕ ರಾಜ್ಯ  ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘ ಆಗ್ರಹಿಸಿದೆ.

ಬಹುರಾಷ್ಟ್ರೀಯ ಕೋಳಿಮಾಂಸ ಮಾರಾಟ ಕಂಪನಿಗಳ ಹಾವಳಿಯಿಂದಾಗಿ ಸ್ವಾವಲಂಬಿ ಕೋಳಿ ಸಾಕಾಣಿಕೆ ರೈತರು ಮಾರುಕಟ್ಟೆಯಲ್ಲಿ ಮಾಂಸದ ದರ ಏರಿಳಿತದ ಪರಿಣಾಮದಿಂದ ಆರ್ಥಿಕವಾಗಿ ಕಂಗಾಲಾಗಿದ್ದಾರೆ ಎಂದು ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಲ್ಲಾಪುರದ ದೇವರಾಜ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ದಿನವೊಂದಕ್ಕೆ 40 ಸಾವಿರ ಕೋಳಿಗಳು, ಸುಮಾರು 80 ಸಾವಿರ ಕೆ.ಜಿ. ಮಾಂಸ ಮಾರಾಟವಾಗುತ್ತದೆ. ಕೋಳಿ ಸಾಕಾಣಿಕೆಯಲ್ಲಿ 100 ರೂ. ಖರ್ಚು ತಗುಲಿದರೆ ಕಂಪನಿಯವರು ಕೇವಲ 70 ರೂ.ಗಳಂತೆ ವ್ಯಾಪಾರ ಮಾಡುತ್ತಾರೆ. ಇದರಿಂದ ಸಾಕಾಣಿಕೆದಾರರಿಗೆ ನಷ್ಟವಾಗುತ್ತದೆ. ಈ ಕುರಿತು ಸಚಿವರ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ ಎಂದರು.

ಸರ್ಕಾರವು ಬಹುರಾಷ್ಟ್ರೀಯ ಕಂಪನಿಗಳಿಗೆ ತೆರಿಗೆ ವಿಧಿಸಬೇಕು. 60:40 ಅನುಪಾತದಲ್ಲಿ ತಳಿ ವಿತರಿಸಲು ಕ್ರಮ ಕೈಗೊಳ್ಳಬೇಕು. ಮಾಂಸ ದರವನ್ನು ಸರ್ಕಾರವೇ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು. ರೈತ ಮುಖಂಡ ಬಲ್ಲೂರು ರವಿಕುಮಾರ್ ಮಾತನಾಡಿ, ಸಣ್ಣ ವ್ಯಾಪಾರಿಗಳಿಗೆ ಸರ್ಕಾರ ಬೆಂಬಲ ಕೊಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲೆಗೆ ಕೃಷಿ ಸಚಿವರು ಆಗಮಿಸಲಿದ್ದು, ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರುಗಳಾದ ಐಗೂರು ನಾಗರಾಜ್, ಮಿಯಾಪುರ ತಿರುಮಲೇಶ್, ಬುಳ್ಳಾಪುರದ ಹನುಮಂತಪ್ಪ, ಗುರುಮೂರ್ತಿ ಜಗಳೂರು, ಶಿವಮೂರ್ತಪ್ಪ ಐಗೂರು ಇತರರು ಉಪಸ್ಥಿತರಿದ್ದರು.

error: Content is protected !!