ಸರ್ಕಾರಿ ತಾಂತ್ರಿಕ ಕಾಲೇಜ್‌ಗಳ ಮೇಲೆ ಸಾಲ

ವಿಶ್ವ ಬ್ಯಾಂಕಿನ ಸಾಮ್ರಾಜ್ಯಶಾಹಿ ಷಡ್ಯಂತ್ರ: ಎಐಡಿಎಸ್ಓ ಖಂಡನೆ

ದಾವಣಗೆರೆ, ನ.12-   ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಮೇಲೆ ವಿಶ್ವ ಬ್ಯಾಂಕಿನ ಸಾಲದ ಹೊರೆ ಹೇರಬೇಡಿ, ಜನರ ತೆರಿಗೆ ಹಣದಿಂದ ಈ ಸಂಸ್ಥೆಗಳನ್ನು ನಡೆಸಿ  ಎಂದು ಎಐಡಿಎಸ್ಓ ಕರ್ನಾಟಕ ರಾಜ್ಯ ಸಮಿತಿ   ಕಾರ್ಯದರ್ಶಿ ಅಜಯ್ ಕಾಮತ್ ಒತ್ತಾಯಿಸಿದ್ದಾರೆ.  

ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಅನುದಾನದ ಕೊರತೆಯಿಂದ ಪರಿತಪಿಸುತ್ತಿವೆ. ಪ್ರತಿಷ್ಠಿತ ಯುವಿಸಿಇ ಸೇರಿದಂತೆ ರಾಜ್ಯದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಅವಶ್ಯಕತೆಗಿಂತ ಕಡಿಮೆ ಸಿಬ್ಬಂದಿಗಳ ಮೇಲೆ ನಡೆಸಲಾಗುತ್ತಿದೆ. ಹೊಸ ನೇಮಕಾತಿಗಳಾಗಿ ಒಂದು ದಶಕವೇ ಕಳೆದಿದೆ. ಕಾಲೇಜು ನಿರ್ವಹಣೆಗಾಗಿ ಅನುದಾನ ಬಿಡುಗಡೆಗೊಳಿಸುವಂತೆ ಯುವಿಸಿಇ ಆಡಳಿತ ಮಂಡಳಿಯು ಇತ್ತೀಚೆಗೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ. ಈ ಕಾಲೇಜುಗಳಲ್ಲಿನ ಹಣಕಾಸಿನ ಶೋಚನೀಯ ಅವಸ್ಥೆಯು ವಿದ್ಯಾರ್ಥಿಗಳ ಅಧ್ಯಯನದ ಮೇಲೆ ದುಷ್ಪರಿಣಾಮ ಬೀರುತ್ತದೆ.

 ಈ ಸಮಸ್ಯೆಗಳನ್ನು ಪರಿಹರಿಸದೆ, ಕಾಲೇಜುಗಳನ್ನು ಉನ್ನತ ದರ್ಜೆಗೇರಿಸುವ ಸರ್ಕಾರದ ಘೋಷಣೆಯು ಕೇವಲ ಪ್ರಹಸನವಾಗುತ್ತದೆ. ಸಿಬ್ಬಂದಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರವು ಹೆಚ್ಚಿನ ಅನುದಾನ ನಿಗದಿ ಪಡಿಸಬೇಕೆಂದು ಎಐಡಿಎಸ್ಓ ಆಗ್ರಹಿಸುತ್ತದೆ.

ರಾಜ್ಯ ಸರ್ಕಾರವು ಕೇವಲ ಕೆಲವೇ ಕಾಲೇಜುಗಳನ್ನು ಆಯ್ಕೆ ಮಾಡುವ ಬದಲು ಎಲ್ಲ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಗಳನ್ನು ಉನ್ನತ ದರ್ಜೆಗೇರಿಸಿ ಅಭಿವೃದ್ಧಿ ಪಡಿಸ ಬೇಕು ಮತ್ತು ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಇಂಜಿನಿ ಯರಿಂಗ್ ಕಾಲೇಜನ್ನು ಆರಂಭಿಸಬೇಕು.

ಸರ್ಕಾರ ಶಿಕ್ಷಣ ಸಂಸ್ಥೆಗಳ ಮೇಲೆ ಸಾಲದ ಹೊರೆಯನ್ನು ಹೊರಿಸಬಾರದು. ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ವೃತ್ತಿ ಶಿಕ್ಷಣವನ್ನು ಪಡೆಯಲು ಸರ್ಕಾರಿ ಶಿಕ್ಷಣ ಸಂಸ್ಥೆಗಳೇ ಆಸರೆಯಾಗಿವೆ. ಕೆಲವು ಷರತ್ತುಗಳೊಂದಿಗೆ ಬರುವ ವಿಶ್ವ ಬ್ಯಾಂಕಿನ ಸಾಲವು, ಶಿಕ್ಷಣದ ಪ್ರಜಾತಾಂತ್ರಿಕ ಮತ್ತು ಸ್ವಾಯತ್ತ ಸಂರಚನೆಗೆ ಧಕ್ಕೆಯುಂಟು ಮಾಡಬಹುದು. ಭವಿಷ್ಯದಲ್ಲಿ ಈ ಸಾಲವನ್ನು ತೀರಿಸುವ ಒತ್ತಾಯಕ್ಕೆ ವಿದ್ಯಾರ್ಥಿಗಳನ್ನು  ತಳ್ಳಲಾಗುತ್ತದೆ. ಇದು ವಿಶ್ವ ಬ್ಯಾಂಕಿನ ಸಾಮ್ರಾಜ್ಯಶಾಹಿ ಷಡ್ಯಂತ್ರದ ಒಂದು ಅಜೆಂಡಾ ಆಗಿದೆ.

 ಹೀಗಾಗಿ, ವಿಶ್ವ ಬ್ಯಾಂಕಿನ ಸಾಲವನ್ನು ಕೈ ಬಿಟ್ಟು ರಾಜ್ಯ ಬಜೆಟ್‌ನಿಂದ ಹೆಚ್ಚಿನ ಅನುದಾನವನ್ನು ಸರ್ಕಾರಿ ಕಾಲೇಜುಗಳಿಗೆ ವಿನಿಯೋಗಿಸಬೇಕೆಂದು ಎಐಡಿಎಸ್ಓ  ಆಗ್ರಹಿಸುವುದಾಗಿ ಅವರು ತಿಳಿಸಿದ್ದಾರೆ.  

error: Content is protected !!