ದಾವಣಗೆರೆ, ನ. 9- ಸರ್ಕಾರದ ಉಚಿತ ಅಕ್ಕಿ ವಿತರಣೆಯಿಂದ ರೈತರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ. ಅಕ್ಕಿ ವಿತರಣೆಯಿಂದ ಸರ್ಕಾರಕ್ಕೆ 9000 ಕೋಟಿ ರೂ. ವೆಚ್ಚವಾಗಲಿದೆ. ಇದರ ಬದಲಿಗೆ ಐದು ಕೆಜಿ ಅಕ್ಕಿ ಅಥವಾ ಜೋಳ, ಒಂದು ಕೆಜಿ ತೊಗರಿಬೇಳೆ, ಒಂದು ಕೆಜಿ ಕಡಲೇಕಾಯಿ ಎಣ್ಣೆ ವಿತರಣೆ ಮಾಡುವುದರಿಂದ ಕೇವಲ 6800 ಕೋಟಿ ರೂ. ವೆಚ್ಚ ಅಗಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿ ಕುಟುಂಬಕ್ಕೆ ಪ್ರೋಟೀನ್ ಸೇರಿದಂತೆ ಇತರೆ ಪೌಷ್ಠಿಕಾಂಶಗಳು ದೊರಕುತ್ತವೆ. ಅಲ್ಲದೇ ರೈತರಿಗೆ ನಕಾರಾತ್ಮಕ ಅನುಕೂಲ ಆಗಲಿದೆ ಎಂದು ಹೇಳಿದರು.
ರಾಜ್ಯದಲ್ಲಿನ 4.42 ಕೋಟಿ ಜನರಿಗೆ ಐದು ಕೆಜಿ ಅಕ್ಕಿಯ ಜಾಗದಲ್ಲಿ ನೀಡುತ್ತಿರುವ ಒಟ್ಟು 9020 ಕೋಟಿ ಹಣದಲ್ಲಿ ರಾಜ್ಯದ ಕೃಷಿ ಕ್ಷೇತ್ರದಲ್ಲಿ ಹಲವಾರು ಮಹತ್ವದ ಮಾದರಿ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ ಎಂದರು.
ಒರಿಸ್ಸಾ ರಾಜ್ಯದಲ್ಲಿರುವಂತೆ ಸಿರಿಧಾನ್ಯಗಳ ಪುನಶ್ಚೇತನಕ್ಕೆ ಅಭಿಯಾನ ಕೈಗೊಳ್ಳಬೇಕು. ಸಾಂಪ್ರದಾಯಿಕ ಬೀಜ ವೈವಿಧ್ಯತೆಯ ಪುನಶ್ಚೇತನ ಸಂರಕ್ಷಣೆ ಮತ್ತು ವಿತರಣೆ ಸೇರಿದಂತೆ ಕರ್ನಾಟಕದ 20 ಬೀಜ ಸಂರಕ್ಷಕರಿಗೆ ಪ್ರೋತ್ಸಾಹ ಕೊಡುವ ಮೂಲಕ ಪುನಶ್ಚೇತನಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ರೈತರ ಉತ್ಪನ್ನಗಳನ್ನು ನೇರವಾಗಿ ತಲುಪಿಸುವ ಸಾವಯವ ಮಾರುಕಟ್ಟೆಗಳ ವ್ಯವಸ್ಥೆ ಮಾಡಬೇಕಾಗಿದೆ. ಇದಲ್ಲದೆ ಎಫ್‌ಪಿಒಗಳಿಗೆ ಬಡ್ಡಿ ಪಾವತಿಸಲು ಬೆಂಬಲ ಮತ್ತು ಸಾಲದ ಖಾತರಿ ನಿಧಿ ತೆಗೆದಿರಿಸಬೇಕು ಎಂದರು.
ಇದಲ್ಲದೆ ರೈತರ ಆತ್ಮಹತ್ಯೆಯಿಂದ ಸಂಕಷ್ಟಕ್ಕೀಡಾದ ಮಹಿಳಾ ರೈತರಿಗೆ ನೆರವು ಸೇರಿದಂತೆ ಸಾಲದ ನಿವಾರಣೆ ಜೊತೆಗೆ ಸಾಲ ಪಾವತಿಸಬೇಕು ಎಂದು ಹೇಳಿದರು.
ಪಡಿತರ ಚೀಟಿ ಆಧಾರದಲ್ಲಿ ಫ್ರೂಟ್ ಪೋರ್ಟಲ್‌ನಲ್ಲಿ ಮಹಿಳಾ ರೈತರ
ನೋಂದಣಿ ಮಾಡಬೇಕು. ಅವರಿಗೆ ತರಬೇತಿ ನೀಡುವ ಮೂಲಕ ಆದ್ಯತಾ ವಲಯದ ಸಾಲ ನೀಡಿಕೆಗೆ ಮುಂದಾಗಬೇಕು. ಅ. 15 ರಿಂದ ಮಹಿಳಾ ರೈತರ ದಿನವೆಂದು ಘೋಷಿಸಬೇಕು ಎಂದು ಒತ್ತಾಯಿಸಿದರು.
ಕನಿಷ್ಠ ಬೆಂಬಲ ಬೆಲೆಯನ್ನು ಕರ್ನಾಟಕದಲ್ಲಿ ಕಾಯ್ದೆಯನ್ನಾಗಿ ರೂಪಿಸಿ, ಆ ಮೂಲಕ ರೈತ ಹೋರಾಟದ ಮಹತ್ವದ ಒತ್ತಾಯವನ್ನು ಜಾರಿಗೆ ತಂದ ಮೊದಲ ರಾಜ್ಯ ಎಂಬ ಗರಿಮೆ ಪಡೆದುಕೊಳ್ಳಬಹುದು ಎಂದರು.
ಇದಲ್ಲದೇ ರಾಜ್ಯ ಸರ್ಕಾರ ರೈತರಿಗೆ ಮಾರಕವಾದ ಎಪಿಎಂಸಿ ಕಾಯ್ದೆ ತಿದ್ದುಪಡಿ, ಭೂ ಸುಧಾರಣಾ ಕಾಯ್ದೆ ಹಾಗೂ ಜಾನುವಾರು ಹತ್ಯೆ ಕಾಯ್ದೆಗಳನ್ನು ವಾಪಾಸ್ ಪಡೆಯಬೇಕು. ಈ ಕುರಿತು ಇದೇ 16 ರಂದು ಸಿಎಂ ಸಭೆ ಕರೆದಿದ್ದು, ವಾಪಾಸ್ ಪಡೆಯುವ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದರೆ ರಾಜ್ಯಾದ್ಯಂತ ಜನಾಂದೋಲನ ರೂಪಿಸಿ, ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಅರುಣ್ ಕುಮಾರ್ ಕುರುಡಿ, ಬುಳ್ಳಾಪುರದ ಹನುಮಂತಪ್ಪ, ಕೊಗ್ಗನೂರು ಹನುಮಂತಪ್ಪ, ಮಂಜುಳಾ ಅಕ್ಕಿ, ರೇವಣಸಿದ್ಧಪ್ಪ, ಅಣಬೇರು ಹನುಮಂತಪ್ಪ, ಜಯಣ್ಣ, ಸಿದ್ಧಪ್ಪ, ರವಿಕಿರಣ್, ನಾಗೇಂದ್ರಪ್ಪ ಮತ್ತಿತರರಿದ್ದರು.