ದಾವಣಗೆರೆ, ನ.9- ಜಮೀನಿನ ಚೆಕ್ ಬಂದಿ ಮತ್ತು ಪೋಡು ನಂಬರ್ ಅದಲು ಬದಲಾಗಿದ್ದನ್ನು ಸರಿಪಡಿಸಲು ಅರ್ಜಿ ಸಲ್ಲಿಸಿದವರಿಂದ ಲಂಚ ಪಡೆಯುತ್ತಿದ್ದ ಡಿಡಿಎಲ್‍ಆರ್ ಕಚೇರಿಯ ಸೂಪರ್ ವೈಸರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
ಇಲ್ಲಿನ ಜಿಲ್ಲಾಡಳಿತ ಭವನದಲ್ಲಿನ ಭೂ ಮಾಪನ ಇಲಾಖೆಯ ಉಪ ನಿರ್ದೇಶಕರ ಕಚೇರಿಯ ಸೂಪರ್ ವೈಸರ್ ಕೇಶವಮೂರ್ತಿ ಲೋಕಾಯುಕ್ತಕ್ಕೆ ಬಿದ್ದ ನೌಕರ.
ಈತ ಪಿ.ಜಿ.ಮುನಿಯಪ್ಪ ತಮ್ಮ ಸೊಸೆಯ ತಾಯಿ ಕೆ.ಎಸ್.ಮೀನಾಕ್ಷಮ್ಮ ಅವರಿಗೆ ಸೇರಿದ ಜಗಳೂರು ತಾಲ್ಲೂಕು ಪಲ್ಲಾಗಟ್ಟೆ ಗ್ರಾಮದ ರಿ.ಸ.ನಂ.65-7ರಲ್ಲಿ 12 ಗುಂಟೆ ಜಮೀನಿನ ಚೆಕ್ ಬಂದಿ ಮತ್ತು ಪೋಡು ನಂಬರ್ ಅದಲು, ಬದಲಾಗಿರುವುದನ್ನು ಸರಿಪಡಿಸಿಕೊಡಲು ಅರ್ಜಿ ಸಲ್ಲಿಸಿದ್ದರು.
ಇದನ್ನು ಮಾಡಿಕೊಡಲು ಕೇಶವಮೂರ್ತಿ 40 ಸಾವಿರ ರೂ.ಗಳಿಗೆ ಬೇಡಿಕೆ ಇಟ್ಟಿದ್ದ. ಕೊನೆಗೆ 30 ಸಾವಿರ ರೂ. ಗೆ ಕೆಲಸ ಮಾಡಿಕೊಡಲು ಒಪ್ಪಿಕೊಂಡಿದ್ದ. ಈ ಬಗ್ಗೆ ಪಿ.ಜಿ.ಮುನಿಯಪ್ಪ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ಮುನಿಯುಪ್ಪನಿಂದ ಕೇಶವಮೂರ್ತಿ 30 ಸಾವಿರ ರೂ. ಲಂಚದ ಹಣದ ಪೈಕಿ 5 ಸಾವಿರ ಮುಂಗಡ ಪಡೆಯುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದಾನೆ.
ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪೂರೆ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಎಚ್.ಎಸ್.ರಾಷ್ಟ್ರಪತಿ, ಸಿ.ಮಧುಸೂದನ್, ಪ್ರಭು ಬ.ಸೂರಿನ ಹಾಗೂ ಸಿಬ್ಬಂದಿಯಾದ ವೀರೇಶಯ್ಯ, ಮಲ್ಲಿಕಾರ್ಜುನ, ಧನರಾಜ, ಗಿರೀಶ, ಕೋಟಿನಾಯ್ಕ, ಕೃಷ್ಣನಾಯ್ಕ, ಬಸವರಾಜರನ್ನು ಒಳಗೊಂಡ ತಂಡವು ದಾಳಿ ಮಾಡಿತ್ತು.