ದಾವಣಗೆರೆ, ನ. 8- ನಗರದ ಅನ್ವೇಷಕರು ಫೌಂಡೇಶನ್ ಹಾಗೂ ನೀವು-ನಾವು ಸಾಂಸ್ಕೃತಿಕ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಎರಡು ದಿನಗಳ ನಾಟಕ ಪ್ರದರ್ಶನ ಬುಧವಾರ ಸಮಾರೋಪಗೊಂಡಿತು.
ನಾಟಕ ಅಕಾಡೆಮಿ ನಿಕಟ ಪೂರ್ವ ಅಧ್ಯಕ್ಷ ಭೀಮಸೇನ್ ಮಾತನಾಡಿ, ದೇಶ ಕಾಯುವ ಯೋಧರು ಮತ್ತು ದೇಶಕ್ಕೆ ಅನ್ನ ಕೊಡುವ ರೈತರು ಪ್ರಮುಖ ಪಾತ್ರ ವಹಿಸುತ್ತಾರೆ. ಇವರಿಬ್ಬರ ಸೇವೆ ಶ್ಲ್ಯಾಘನೀಯ ಎಂದರು.
ದೇಶ ರಕ್ಷಣೆಯಲ್ಲಿನ ಯೋಧರು ತಮ್ಮ ಇಡೀ ಕುಟುಂಬವನ್ನು ಬಿಟ್ಟು ಜೀವದ ಹಂಗು ತೊರೆದು ಗಡಿಭಾಗದಲ್ಲಿ ದೇಶ ಕಾಯುತ್ತಾರೆ. ರೈತ ಭತ್ತ ಬೆಳೆಯುವ ಮೂಲಕ ದೇಶಕ್ಕೆ ಅನ್ನ ನೀಡುತ್ತಾನೆ. ಇವರಿಬ್ಬರೂ ಸಮಾಜದಲ್ಲಿ ಪ್ರಾತ:ಸ್ಮರಣೀಯರು. ಇವರ ಸೇವೆ ಅಮೋಘವಾದುದು ಎಂದು ಹೇಳಿದರು.
`ಹುತಾತ್ಮರು’ ನಾಟಕ ಪ್ರದರ್ಶನ ನಮಗೆಲ್ಲಾ ಪ್ರೇರಣೆ ನೀಡಿದೆ. ಇಂತಹ ಪ್ರದರ್ಶನಗಳು ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಪ್ರದರ್ಶನಗೊಳ್ಳುವ ಅಗತ್ಯವಿದೆ ಎಂದರು.
ಇದೇ ವೇಳೆ ನಿವೃತ್ತ ಯೋಧರಾದ ಅಶೋಕ ಪಾಟೀಲ್ ಅವರನ್ನು ಗೌರವಿಸಲಾಯಿತು.
ಜಾನಪದ ವಿದ್ವಾಂಸರೂ, ಬಾಪೂಜಿ ವಿದ್ಯಾಸಂಸ್ಥೆ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ. ಈಶ್ವರಪ್ಪ ಮಾತನಾಡಿ, ಹಿಂದೆ ಪ್ರತಿಮಾ ಸಭಾದಿಂದ ಅನೇಕ ನಾಟಕಗಳನ್ನು ಪ್ರದರ್ಶಿಸುವ ಮೂಲಕ ರಂಗ ಚಟುವಟಿಕೆಗಳನ್ನು ನಿರಂತರ ವಾಗಿ ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ರಂಗ ಪ್ರದರ್ಶನಗಳು ಕಡಿ ಮೆಯಾಗುತ್ತಿರು ಈ ದಿನಗಳಲ್ಲಿ ಸಹ ಸಿದ್ಧರಾಜ್ ಅವರು ರಂಗ ಚಟುವಟಿಕೆಗಳನ್ನು ಜೀವಂತವಾಗಿ ಡುವ ಪ್ರಯತ್ನ ಮಾಡಿದ್ದಾರೆಂದು ಪ್ರಶಂಸಿಸಿದರು.
ಏಕ ವ್ಯಕ್ತಿ ಪ್ರದರ್ಶನ ಕಷ್ಟಕರವಾದುದು. `ಹುತಾತ್ಮರು ‘ ಪ್ರದರ್ಶನ ತುಂಬಾ ಚನ್ನಾಗಿ ಮೂಡಿಬಂದಿದ್ದು, ಶಾಲಾ-ಕಾಲೇಜುಗಳಲ್ಲಿ ದೇಶಭಕ್ತಿ ಮೂಡಿಸುವ ರಂಗ ಕಲೆಗಳು ಪ್ರದರ್ಶನಗೊಳ್ಳುವ ಅವಶ್ಯವಿದೆ ಎಂದರು.
ಹಿರಿಯ ಪತ್ರಕರ್ತರೂ, ರಂಗಕರ್ಮಿ ಬಾ.ಮ. ಬಸವರಾಜಯ್ಯ, ಅಶೋಕ್ ಪಾಟೀಲ್ ಮಾತನಾಡಿದರು. ಕನ್ನಡ ಪರ ಹೋರಾಟಗಾರ ಟಿ.ಶಿವಕುಮಾರ್, ಎನ್.ಟಿ. ಮಂಜುನಾಥ್, ನೀವು-ನಾವು ತಂಡದ ಮಂಜುನಾಥ್, ಎಸ್.ಎಸ್. ಸಿದ್ಧರಾಜು, ರಂಗ ನಿರ್ದೇಶಕ ಹನುಮಂತ್ ಪೂಜಾರ್, ರವೀಂದ್ರ ಅರಳಗುಪ್ಪೆ ಮತ್ತಿತರರು ಉಪಸ್ಥಿತರಿದ್ದರು.