ದಾವಣಗೆರೆ, ನ.6- ಜಿಲ್ಲೆಗೆ ಸಂಸದ ಜಿ.ಎಂ. ಸಿದ್ದೇಶ್ವರ ಏನು ಕೊಡುಗೆ ನೀಡಿದ್ದಾರೆ ? ಎಂದು ಪದೇ ಪದೇ ಕೇಳುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು, ಮೊದಲು ತಾವು ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎಂದು ಉತ್ತರಿಸಲಿ ಎಂದು ಬಿಜೆಪಿ ಮುಖಂಡ ಕೊಂಡಜ್ಜಿ ಜಯಪ್ರಕಾಶ್ ಹೇಳಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಸಂಸದ ಸಿದ್ದೇಶ್ವರ ಅವರ ಬಗ್ಗೆ ಸಚಿವರು ಬಾಲಿಶತನದ ಹಾಗೂ ಅಸಂವಿಧಾನಿಕ ಪದ ಬಳಸುತ್ತಿರುವುದು ಖಂಡನೀಯ. ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು, ಜನ ಸಾಮಾನ್ಯರಿಗೂ ನೋವುಂಟು ಮಾಡದಂತಹ ಪದಗಳನ್ನು ಬಳಕೆ ಮಾಡಬೇಕು ಎಂದು ಹೇಳಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ದಾವಣಗೆರೆ ಆಯ್ಕೆ ಮಾಡಿಸಲು ಯೋಜನೆಯ ಕ್ರಿಯಾ ಯೋಜನೆ ಹಾಗೂ ರೂಪುರೇಷೆ ಮಾಡಿ ಸರ್ಕಾರಕ್ಕೆ ಸಲ್ಲಿಸಲು ಸೂಚಿಸಿದ್ದೇ ಸಂಸದರು. ಆದರೆ ನೀವು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸಂಸದರ ಪಾತ್ರವೇನು? ಎಂದು ಪದೇ ಪದೇ ಪ್ರಶ್ನಿಸುವುದು ಸರಿಯಲ್ಲ ಎಂದರು.
ಜೆ.ಪಿ. ಅವನ್ಯಾರು? ಎಂದು ಇತ್ತೀಚೆಗೆ ಮಾಧ್ಯಮದವರ ಮುಂದೆ ಸಚಿವರು ಪ್ರಶ್ನಿಸಿದ್ದಾರೆ. 1994ರಿಂದ 2008ರವರೆಗೆ ನಾನು ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದು, ವಿವಿಧ ಸಂಘಟನೆಗಳ ನಾಯಕನಾಗಿರುವುದು ತಾವು ನೋಡಿಲ್ಲವೇ? ಎಂದು ಜೆಪಿ ಪ್ರಶ್ನಿಸಿದರು. ವಿದ್ಯಾರ್ಥಿ ನಾಯಕನಾಗಿ, ಹೋರಾಟಗಾರನಾಗಿ 40 ವರ್ಷ ಜನ ಸೇವೆಯಲ್ಲಿ ಪಾಲ್ಗೊಂ ಡಿದ್ದ ನಾನು, ಇಂದಿನ ವ್ಯಾಪಾರಿ ರಾಜಕಾರಣದಲ್ಲಿ ಕಳೆದು ಹೋಗಿದ್ದೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಶಿವರಾಜ್ ಪಾಟೀಲ್ ಇದ್ದರು.