ಡಿಸೆಂಬರ್ ಒಳಗೆ ಜಲಸಿರಿ ಕಾಮಗಾರಿ ಪೂರ್ಣಗೊಳಿಸಿ

ಡಿಸೆಂಬರ್ ಒಳಗೆ ಜಲಸಿರಿ ಕಾಮಗಾರಿ ಪೂರ್ಣಗೊಳಿಸಿ

ದಾವಣಗೆರೆ, ನ. 5 – ಡಿಸೆಂಬರ್ ಅಂತ್ಯದೊಳಗೆ ಜಲಸಿರಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. 2024ರ ಮಾರ್ಚ್ ತಿಂಗಳ ಒಳಗೆ ಪ್ರಾಯೋಗಿಕ ಹಂತವನ್ನು ಮುಗಿಸಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಗಡುವು ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಿನ್ನೆ  ನಡೆದ ಜಲಸಿರಿ 24/7 ನೀರಿನ ಯೋಜನೆ ಜಾರಿಗೆ ತರುತ್ತಿರುವ ಕೆ.ಯು.ಐ.ಡಿ.ಎಫ್.ಸಿ. (ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ) ಅಧಿಕಾರಿಗಳು ಹಾಗೂ ನಗರ ಪಾಲಿಕೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಯೋಜನೆಯ ಸಗಟು ಹಾಗೂ ಬಿಡಿ ಕಾಮಗಾರಿಗಳು ಈಗಾಗಲೇ ಸಾಕಷ್ಟು ವಿಳಂಬ ವಾಗಿದೆ. ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣಗೊ ಳಿಸಬೇಕು ಎಂದು ಸಂಸದರು ತಾಕೀತು ಮಾಡಿದರು.

ಸಭೆಯಲ್ಲಿ ಮಾತನಾಡಿದ ಅಧಿಕಾರಿಗಳು, ಮೂರು ಕಡೆಗಳಲ್ಲಿ ಸಗಟು ನೀರು ಪೂರೈಕೆ ಜಾಲದ ಕಾಮಗಾರಿ ಬಾಕಿ ಇದೆ. ಹಳೇಕುಂದುವಾಡದ ಟ್ಯಾಂಕ್ ಕಾಮಗಾರಿ ನಡೆಸಲಾಗುತ್ತಿದೆ. 11 ಸಾವಿರ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಬೇಕಿದೆ ಎಂದು ಹೇಳಿದರು.

ಜಲಸಿರಿ ಯೋಜನೆ ಪೂರ್ಣಗೊಳಿಸಿದ ನಂತರ ಮೂರು ತಿಂಗಳವರೆಗೆ ಪ್ರಾಯೋಗಿಕ ಅವಧಿ ಇರುತ್ತದೆ. ನಂತರ ಯೋಜನೆಯನ್ನು ಸಂಬಂಧಿಸಿದವರಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಕಾಮಗಾರಿ ಪ್ರಗತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ಕೆ.ಯು.ಐ.ಡಿ.ಎಫ್.ಸಿ. ವ್ಯವಸ್ಥಾಪಕ ನಿರ್ದೇಶಕಿ ದೀಪಾ ಚೋಳನ್ ಅವರ ಜೊತೆ ದೂರವಾಣಿಯಲ್ಲಿ ಮಾತನಾಡಿದರು. ಕಾಮಗಾರಿ ವಿಳಂಬಕ್ಕಾಗಿ ವಿಧಿಸಿರುವ ದಂಡ ಮಾಹಿತಿ ಪಡೆದ ಸಂಸದರು, ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳಿಸಲು ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದರು.

ಸಭೆಯಲ್ಲಿ ಮಾತನಾಡಿದ ಜಲಸಿರಿ ಯೋಜನೆಯ ಕಾರ್ಯಕಾರಿ ಅಭಿಯಂತರ ರವಿಕುಮಾರ್, ನಗರವನ್ನು 50 ವಲಯಗಳಾಗಿ ವಿಂಗಡಿಸಲಾಗಿದೆ. 12 ವಲಯಗಳಲ್ಲಿ ಜಲಸಿರಿ ಮಾರ್ಗಗಳಲ್ಲಿ ನೀರು ಪೂರೈಕೆಯಾಗುತ್ತಿದೆ. 11ರಲ್ಲಿ ಪ್ರಾಯೋಗಿಕವಾಗಿ ನೀರು ಪೂರೈಕೆಯಾಗುತ್ತಿದೆ. 27 ವಲಯಗಳಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದರು.

ಜಲಸಿರಿ ಕಾಮಗಾರಿಗಾಗಿ ಗುಂಡಿ ತೆಗೆದಾಗ ಸರಿಯಾಗಿ ಮುಚ್ಚುತ್ತಿಲ್ಲ. ಪದೇ ಪದೇ ಗುಂಡಿ ಅಗಿಯಲಾಗುತ್ತಿದೆ ಎಂದು ಆಕ್ಷೇಪಿಸಿದ ಸಂಸದರು, ಜನರಿಗೆ ತೊಂದರೆಯಾಗದಂತೆ ಕಾಮಗಾರಿ ಪೂರ್ಣಗೊಳಿಸಿ ಎಂದು ತಾಕೀತು ಮಾಡಿದರು.

ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ಮಾತನಾಡಿ, ನಗರದಲ್ಲಿ 97 ಸಾವಿರ ನಲ್ಲಿ ಸಂಪರ್ಕ ಕಲ್ಪಿಸಬೇಕಿದೆ. 86 ಸಾವಿರ ನಲ್ಲಿಗಳ ಸಂಪರ್ಕ ಕಲ್ಪಿಸಲಾಗಿದ್ದು, ಇನ್ನೂ 11 ಸಾವಿರ ನಲ್ಲಿಗಳ ಸಂಪರ್ಕ ಬಾಕಿ ಇದೆ ಎಂದು ಹೇಳಿದರು. ಸಭೆಯಲ್ಲಿ ಜಲಸಿರಿ ಯೋಜನೆಯ ಉಪಯೋಜನಾ ನಿರ್ದೇಶಕ ವೀರೇಂದ್ರ ಕುಮಾರ್, ಪಾಲಿಕೆಯ ಇ.ಇ. ಉದಯ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!