ದಾವಣಗೆರೆ, ನ. 1- 2023 ರ ಐಸಿಸಿ ವರ್ಲ್ಡ್ಕಪ್ ಕ್ರಿಕೆಟ್ನಲ್ಲಿ ಭಾರತದ ಗೆಲುವಿಗೆ ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು `ವರ್ಲ್ಡ್ಕಪ್ ನಮ್ಮದು’ಎಂಬ ಶೀರ್ಷಿಕೆಯಡಿ ವಿಡಿಯೋ ಮಾಡಿ ಶುಭ ಹಾರೈಸಿದ್ದಾರೆಂದು ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಜಸ್ಟಿನ್ ಡಿಸೋಜಾ ಸುದ್ದಿಗೋಷ್ಠಿಯಲ್ಲಿ ತಮ್ಮ ಸಂತಸ ಹಂಚಿಕೊಂಡರು.
ವಿಶ್ವದಾದ್ಯಂತ ಐಸಿಸಿ ವರ್ಲ್ಡ್ಕಪ್ ಕ್ರಿಕೆಟ್ ಪಂದ್ಯ ತೀವ್ರ ಕೂತೂಹಲ ಮೂಡಿಸುತ್ತಿದ್ದು, ಭಾರತದ ವಿವಿಧ ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ನಡೆಯುತ್ತಿರುವ ಕ್ರಿಕೆಟ್ ಎಲ್ಲರ ಗಮನ ಸೆಳೆಯುತ್ತಿದೆ ಎಂದರು.
12 ವರ್ಷಗಳ ಹಿಂದೆ ಸಿದ್ಧಗಂಗಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಕ್ರಿಕೆಟ್ ಗೆಲುವಿಗಾಗಿ `ಗೆದ್ದು ಬಾ ಇಂಡಿಯಾ’ ಹಾಡಿನ ಮೂಲಕ ಶುಭ ಹಾರೈಸಿದ್ದರು. ಆಗ ಕ್ಯಾಪ್ಟನ್ ಧೋನಿ ತಂಡದವರು ಕ್ರಿಕೆಟ್ ವರ್ಲ್ಡ್ ಕಪ್ ತಮ್ಮದಾಗಿಸಿಕೊಂಡಾಗ ಕುಣಿದು ಕುಪ್ಪಳಿಸಿದ್ದರು. ಇದೀಗ ಮತ್ತೊಮ್ಮೆ ಗೆಲುವಿಗಾಗಿ ತಮ್ಮ ಉತ್ತೇಜನಾಪೂರ್ವಕ ಹಾಡು `ವರ್ಲ್ಡ್ಕಪ್ ನಮ್ಮದು’ ಎಂಬ ಹಾಡಿಗೆ ಕುಣಿದು ಸ್ಫೂರ್ತಿ ತುಂಬುತ್ತಿದ್ದಾರೆಂದು ಹೇಳಿದರು.
ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ವಿಡಿಯೋ ಬಿಡುಗಡೆ ಮಾಡಿ ಮಾತನಾಡಿ, ಸಿದ್ಧಗಂಗಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ಕ್ರಿಯಾಶೀಲತೆಗೆ, ಕ್ರೀಡಾ ಮನೋಭಾವನೆಗೆ ಶ್ಲ್ಯಾಘನೆ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದರು.ಅಲ್ಲದೇ ಶಾಲೆಯ ಯೂಟ್ಯೂಬ್ ವೀಕ್ಷಣೆಯ ಮೂಲಕ 15 ಸಾವಿರಕ್ಕೂ ಹೆಚ್ಚು ವೀಕ್ಷಕರು ವೀಕ್ಷಣೆ ಮಾಡಿ ಕ್ರಿಕೆಟ್ ಪ್ರೇಮದ ಮೂಲಕ ಭಾರತ ತಂಡವನ್ನು ಹುರಿದುಂಬಿಸುತ್ತಿದ್ದಾರೆಂದರು.
ವಿ.ಎಸ್.ಮಾನಸ ಹಾಗೂ ಡಿ.ಎಸ್. ಪ್ರಶಾಂತ್ ಅವರು `ವರ್ಲ್ಡ್ಕಪ್ ನಮ್ಮದು’ ಹಾಡಿಗೆ ಧ್ವನಿ ನೀಡಿದ್ದಾರೆ. ಸುಮನ್ ಅವರ ಕೋರಿಯೋಗ್ರಫಿ, ರೈಸಿಂಗ್ ಟ್ಯಾಲೆಂಟ್ ಸ್ಟುಡಿಯೋದ ಸಿಕಂದರ್ ರೆಕಾರ್ಡಿಂಗ್ ಮಾಡಿದ್ದಾರೆ.
ಸಮೀರ್ ಅವರ ಛಾಯಾಗ್ರಹಣ, ಹಿರಿಯ ಹಾಗೂ ಕಿರಿಯ ವಿದ್ಯಾರ್ಥಿಗಳೇ ಸೇರಿ ವಿಡಿಯೋದ ಹೈಲೈಟ್ಸ್, ಎಡಿಟಿಂಗ್ ಮಾಡಿದ್ದಾರೆ. ವಿದ್ಯಾರ್ಥಿಗಳ ಪ್ರಯತ್ನಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಂಸ್ಥೆಯ 2000 ಸಾವಿರ ವಿದ್ಯಾರ್ಥಿಗಳು ಈ ವಿಡಿಯೋ ರೆಕಾರ್ಡಿಂಗ್ನಲ್ಲಿ ಪಾಲ್ಗೊಂಡಿದ್ದಾರೆ. ವಿಡಿಯೋಗಾಗಿ ಯಕ್ಷಗಾನ ಮೇಕಪ್ ಮಾಡಿದವರು ಹಟ್ಟಿಯಂಗಡಿ ಆನಂದ ಶೆಟ್ಟರು ಮತ್ತು ಬೇಳೂರು ಸಂತೋಷ್ ಕುಮಾರ್ ಶೆಟ್ಟಿ, ಬೃಂದಾ ಮತ್ತು ಶಾಲಾ-ಕಾಲೇಜಿನ ಶಿಕ್ಷಕರು, ಪಾಲಕರು ವಿವಿಧ ಉಡುಪುಗಳಿಂದ ಸಿಂಗಾರಗೊಳಿಸಿ ಹಾಡಿನ ಮೆರಗು ಹೆಚ್ಚಿಸಿದ್ದಾರೆ.
ಸಂಸ್ಥೆಯ ಕಾರ್ಯದರ್ಶಿ ಹೇಮಂತ್ ಅವರ ಜೊತೆ ಹಿರಿಯ ವಿದ್ಯಾರ್ಥಿಗಳಾದ ಮನು, ಹರ್ಷ, ಸಾಮ್ರಾಟ್, ನರೇಂದ್ರ ವಿಡಿಯೋ ಚಿತ್ರೀಕರಣಕ್ಕೆ ಸಹಕರಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಸಂಸ್ಥೆಯ ನಿರ್ದೇಶಕ ಡಿ.ಎಸ್.ಜಯಂತ್ ಮಾತ ನಾಡಿ, 40 ಸಾವಿರ ರೂ. ವೆಚ್ಚದಲ್ಲಿ ಈ ವಿಡಿಯೋವನ್ನು ಸಿದ್ಧಪಡಿಸಲಾಗಿದ್ದು, 3 ನಿಮಿಷ, 40 ಸೆಕೆಂಡ್ ಅವಧಿಯ ದ್ದಾಗಿದೆ. ಸಿದ್ಧಗಂಗಾ ಶಾಲಾವರಣ, ಆನಗೋಡಿನಲ್ಲಿರುವ ಎಂ.ಎಸ್. ಶಿವಣ್ಣನವರ ಸ್ಮಾರಕ, ಕೊಂಡಜ್ಜಿಯ ಎಂಎಸ್ಎಸ್ ತರಬೇತಿ ಕೇಂದ್ರದಲ್ಲಿ ಚಿತ್ರೀಕರಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿ.ಎಸ್. ಮಾನಸ, ಡಿ.ಎಸ್.ಪ್ರಶಾಂತ್, ಸಮೀರ್, ಲಾಸ್ಯ, ಸಿಕಂದರ್, ಸಿಂಚನ ಮತ್ತಿತರರು ಉಪಸ್ಥಿತರಿದ್ದರು.