ಜಿಲ್ಲೆಯಾದ್ಯಂತ ಪ್ರತಿ ಮನೆಗಳ ಮೇಲೆ ಕನ್ನಡ ಬಾವುಟ ಹಾರಲಿ

ಜಿಲ್ಲೆಯಾದ್ಯಂತ ಪ್ರತಿ ಮನೆಗಳ ಮೇಲೆ ಕನ್ನಡ ಬಾವುಟ ಹಾರಲಿ

ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಮನವಿ

ದಾವಣಗೆರೆ, ಅ.27- 68ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ನಮ್ಮ ರಾಜ್ಯಕ್ಕೆ `ಕರ್ನಾಟಕ’ ಎಂದು ಮರು ನಾಮಕರಣವಾಗಿ 50 ವರ್ಷಗಳಾದ ಸವಿನೆನಪಿಗಾಗಿ ಜಿಲ್ಲೆಯ ಕನ್ನಡಿಗರ ಪ್ರತಿ ಮನೆಗಳ ಮೇಲೆ ಕನ್ನಡ ಬಾವುಟ ( ಕೆಂಪು, ಹಳದಿಯ ) ಹಾರಿಸ ಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ.ವಾಮದೇವಪ್ಪ ಜಿಲ್ಲೆಯ ಜನತೆಗೆ ಮನವಿ ಮಾಡಿದ್ದಾರೆ. 

ದಾವಣಗೆರೆ ಜಿಲ್ಲೆಯ ಕನ್ನಡಿಗರು ಕನ್ನಡ ಭಾಷಾ ಪ್ರೇಮಿಗಳಾಗಿದ್ದಾರೆ. 68 ನೇ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮ, ಸಡಗರಗಳಿಂದ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಪ್ರತೀ ಕನ್ನಡಿಗರ ಮನೆ ಮೇಲೆ ಕನ್ನಡ ಬಾವುಟ ಹಾರಾಡಿಸುವುದರಿಂದ  ರಾಜ್ಯೋತ್ಸವದ ಮೆರಗು ಪ್ರತೀ ಮನೆ ಮನೆಯಲ್ಲೂ ಸಂಭ್ರಮಿಸುತ್ತದೆ. ಆದ್ದರಿಂದ ಸರ್ವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಈ ವಿಶೇಷ ಮನವಿಯನ್ನು ಮನ್ನಿಸಿ ಕನ್ನಡಿಗರು ನವೆಂಬರ್ 1ರ ಬುಧವಾರ ಬೆಳಗ್ಗೆ ತಮ್ಮ ತಮ್ಮ ಮನೆಗಳ ಮೇಲೆ ಹಳದಿ, ಕೆಂಪು ವರ್ಣದ ಕನ್ನಡ ಧ್ವಜವನ್ನು ಹಾರಿಸುವುದರ ಮೂಲಕ ನಾಡು, ನುಡಿ ಪ್ರೇಮವನ್ನು  ಪ್ರದರ್ಶಿಸಬೇಕು ಎಂದು ಅವರು ತಿಳಿಸಿದ್ದಾರೆ. 

ಪ್ರತಿ ಗ್ರಾಮಗಳಲ್ಲಿ ಧ್ವಜ ಸ್ತಂಭಗಳನ್ನು  ನಿರ್ಮಿಸಿ ವರ್ಷವಿಡೀ ಕನ್ನಡದ ಬಾವುಟ ಹಾರಾಡುವಂತೆ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರುಗಳು ಮತ್ತು ಅಧಿಕಾರಿಗಳಲ್ಲಿ ಕಸಾಪ ಜಿಲ್ಲಾಧ್ಯಕ್ಷರು ಮನವಿ ಮಾಡಿದ್ದಾರೆ.

error: Content is protected !!