ದಾವಣಗೆರೆ, ಅ. 24 – ರಾಜ್ಯ ಬಿಜೆಪಿಯಲ್ಲಿ ಕೆಲವರು ಸರ್ವಾಧಿಕಾರಿ ಧೋರಣೆ ನಡೆಸುತ್ತಿದ್ದಾರೆ. ಈ ಧೋರಣೆ ಕೊನೆಯಾಗ ಬೇಕು ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾ ಚಾರ್ಯ ಹೇಳಿದ್ದಾರೆ.
ಇಂದಿಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪರೋಕ್ಷ ವಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ಹರಿಹಾಯ್ದರು.
ನಾವು ಏನಾದರೂ ಮಾತ ನಾಡಿದರೆ ಪಕ್ಷ ವಿರೋಧಿ ಹೇಳಿಕೆ. ಅವರು ಮಾತ ನಾಡಿದರೆ ಪಕ್ಷ ಸಂಘಟನೆ. ಎಂಎಲ್‌ಸಿ, ರಾಜ್ಯಸಭೆ ಸದಸ್ಯತ್ವ ಅವರು ಹೇಳಿದ ವರಿಗೆ ಮಾತ್ರ. ಅವರ ಒಳ ಹೊಡೆತದ ಬಗ್ಗೆ ಹೇಳು ವಂತೆಯೇ ಇಲ್ಲ ಎಂದು ಹೇಳಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಪಕ್ಷದ ರಾಜ್ಯ ಅಧ್ಯಕ್ಷರನ್ನಾಗಿ ಮಾಡುವ ಚಿಂತನೆ ನಡೆಯುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆ ಗೆ ಉತ್ತರಿಸಿದ ಅವರು, ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ಕಾದು ನೋಡೋಣ. ನಾನು ಸಹ ರಾಜ್ಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಕ್ಷ ಕಟ್ಟಿ ಬೆಳೆಸಿದವರು. ಯಡಿಯೂರಪ್ಪ ಅವರಂತಹ ಜಾತ್ಯತೀತ, ಸಮರ್ಥ ನಾಯಕ ಬೇಕು. ಅವರ ನೇತೃತ್ವದಲ್ಲೇ ಚುನಾವಣೆಗೆ ಹೋಗುವುದು ಸೂಕ್ತ ಎಂದು ಹೇಳಿದರು.
ಸಂಸದ ಸಿದ್ದೇಶ್ವರ ಅವರ ಬಗ್ಗೆ ನನಗೆ ಗೌರವವಿದೆ. ಅವರು ವಯಸ್ಸಿನಲ್ಲಿ ಹಿರಿಯರಾಗಿರಬಹುದು, ಪಕ್ಷದಲ್ಲಿ ನಾನು ಅವರಿಗಿಂತ ಹಿರಿಯ. ಪಕ್ಷಕ್ಕಾಗಿ ಎರಡು ಬಾರಿ ಜೈಲಿಗೆ ಹೋಗಿ ಬಂದಿದ್ದೇನೆ. ನನ್ನ ರಕ್ತದ ಪ್ರತಿ ಕಣದಲ್ಲೂ ಹಿಂದುತ್ವ ಇದೆ ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದರು.