26ರಂದು ಬಂಜಾರ ಬುಡಕಟ್ಟು ಸಂಸ್ಕೃತಿ ಉತ್ಸವ

26ರಂದು ಬಂಜಾರ ಬುಡಕಟ್ಟು ಸಂಸ್ಕೃತಿ ಉತ್ಸವ

ಹರಪನಹಳ್ಳಿಯಲ್ಲಿ ಬಂಜಾರ ಪೀಠದ ಶ್ರೀ ಸರ್ದಾರ ಸೇವಾಲಾಲ್ ಸ್ವಾಮೀಜಿ

ಹರಪನಹಳ್ಳಿ, ಅ.20-  ಚಿತ್ರದುರ್ಗ ದಲ್ಲಿ  ಇದೇ ದಿನಾಂಕ 26 ಮತ್ತು 27 ರಂದು ಎರಡು ದಿನಗಳ ಕಾಲ ಬಂಜಾರ ಬುಡಕಟ್ಟು (ಲಂಬಾಣಿ) ಸಂಸ್ಕೃತಿ ಉತ್ಸವದ ಅಂಗವಾಗಿ ಅತಿ ಹಿಂದುಳಿದ ಸಮುದಾಯಗಳ ಸಮಾಲೋಚನಾ ಸಭೆ ಹಾಗೂ ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಸಂಕಲ್ಪ ಪೂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಚಿತ್ರದುರ್ಗದ ಬಂಜಾರ ಪೀಠದ ಶ್ರೀ ಸರ್ದಾರ ಸೇವಾಲಾಲ್ ಸ್ವಾಮೀಜಿ ತಿಳಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಈ ಉತ್ಸವದಲ್ಲಿ ಸಚಿವರುಗಳಾದ ಸತೀಶ್ ಜಾರಕಿಹೊಳಿ, ಶಿವರಾಜ ತಂಗಡಗಿ, ಎಸ್.ಎಸ್. ಮಲ್ಲಿಕಾರ್ಜುನ್, ಉಪಸಭಾಪತಿ ರುದ್ರಪ್ಪ ಲಮಾಣಿ ಸೇರಿದಂತೆ ಬಂಜಾರ ಸಮುದಾಯದ ಹಾಲಿ ಮತ್ತು ಮಾಜಿ ಶಾಸಕರು ಹಾಗೂ ಸಮಾಜದ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ಸಂಪುಟ ದಲ್ಲಿ ಬಂಜಾರ ಸಮುದಾಯಕ್ಕೆ ಸಚಿವ ಸ್ಥಾನ ಸಿಗದೇ ಅನ್ಯಾಯವಾಗಿದ್ದು, ಈಗಲಾ ದರೂ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂಜಾರ ಸಮು ದಾಯಕ್ಕೆ ಸಚಿವ ಸ್ಥಾನ ನೀಡುವಂತೆ ಸ್ಥಾನಕ್ಕೆ ಒತ್ತಾಯಿಸಿದ ಅವರು, ಕೇವಲ ಉಪಸಭಾಪತಿ ಸ್ಥಾನ ಕೊಟ್ಟು ಸಮಾಧಾನ ಪಡಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಂಜಾರ ಸಮುದಾಯಕ್ಕೆ ಲೋಕಸೇವಾ ಆಯೋಗದಲ್ಲಿ ಸದಸ್ಯ ಸ್ಥಾನ, ವಿಶ್ವ ವಿದ್ಯಾಲಯದಲ್ಲಿ ಕುಲಪತಿಗಳನ್ನು ನೇಮಕ ಮಾಡಬೇಕು ಹಾಗೂ ತಾಂಡಾ ಅಭಿವೃದ್ಧಿ ನಿಗಮಕ್ಕೆ ಸೂಕ್ತ ಮತ್ತು ಸೃಜನಶೀಲ ಸಮಾಜದ ಬಗ್ಗೆ ಕಾಳಜಿ ಇರುವಂತಹ ವ್ಯಕ್ತಿಯನ್ನು ಅಧ್ಯಕ್ಷರಾಗಿ ನೇಮಕ ಮಾಡಬೇಕೆಂದು ಒತ್ತಾಯಿಸಿದರು.

ಹರಪನಹಳ್ಳಿ ತಾಲ್ಲೂಕಿನಲ್ಲಿ ಬಂಜಾರ ಸಮುದಾಯದವರು ಗುಳೇ ಹೋಗುವವರ ಸಂಖ್ಯೆ ಹೆಚ್ಚಾಗಿದ್ದು, ಆದ್ದರಿಂದ ವಲಸೆ ಹೋಗುವುದನ್ನು ತಪ್ಪಿಸಲು ಸರ್ಕಾರಕ್ಕೆ ಮನವಿ ಮಾಡಿದರು. ವಲಸೆ ಹೋಗುವ ಕುಟುಂಬದ ಮಕ್ಕಳಿಗೆ ಟೆಂಟ್‌ ಶಾಲೆ ಹಾಗೂ ಬಂಜಾರ ಸಮುದಾಯದ ಬಡವರಿಗೆ ಸ್ವಯಂ ಉದ್ಯೋಗ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಂಜಾರ ಸಮುದಾಯದವರಿಗೆ ರಾಷ್ಟ್ರೀಯ ಪಕ್ಷಗಳು ಸರಿಯಾಗಿ ಸ್ಥಾನ ಹಂಚಿಕೆ ಮಾಡಿಲ್ಲ. ಆದ್ದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿಯಾದರೂ ಜನಸಂಖ್ಯೆಗೆ ಅನುಗುಣವಾಗಿ ಬಂಜಾರ ಸಮುದಾಯಕ್ಕೆ ಸ್ಥಾನಗಳನ್ನು ಹಂಚಿಕೆ ಮಾಡಬೇಕೆಂದು ಮನವಿ ಮಾಡಿದರು.

ಸುದ್ದಿಗೊಷ್ಠಿಯಲ್ಲಿ ಬಂಜಾರ ಸಮಾಜದ ಯುವ ಮುಖಂಡ ಪಿ.ಶಿವಕುಮಾರ್ ನಾಯ್ಕ್, ರಾಜ್ಯ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನಾಯ್ಕ್, ಬಂಜಾರ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಕೆ.ಡಿ.ನಾಯ್ಕ್, ಮುಖಂಡರಾದ ಹರೀಶ್ ನಾಯ್ಕ್, ವೀರೇಶನಾಯ್ಕ್, ಶಶಿಕುಮಾರ್ ನಾಯ್ಕ್, ವಿ. ಮಲ್ಲೇಶನಾಯ್ಕ್, ಶಾಂತಾನಾಯ್ಕ್, ಹರಿಶ್ಚಂದ್ರ ನಾಯ್ಕ್, ನೀಲಾನಾಯ್ಕ್, ಚಂದ್ರನಾಯ್ಕ್, ಕೊಟ್ರೇಶ್ ನಾಯ್ಕ, ಶಾಂತನಾಯ್ಕ, ಪ್ರಸನ್ನ ಸೇರಿದಂತೆ  ಮತ್ತಿತರರು ಉಪಸ್ಥಿತರಿದ್ದರು.

error: Content is protected !!