ಸಾಲ ತೀರುವಳಿ ಮಾಡುವಂತೆ ಕಿರುಕುಳ: ರೈತ ಸಂಘದ ಆರೋಪ

ದಾವಣಗೆರೆ, ಅ. 18- ಟ್ರ್ಯಾಕ್ಟರ್ ಖರೀದಿಗಾಗಿ ಖಾಸಗಿ ಬ್ಯಾಂಕಿನಿಂದ ಸಾಲ ಪಡೆದು, ಮರು ಪಾವತಿ ಮಾಡುತ್ತಾ ಬಂದಿದ್ದರೂ ಸಹ ಕಂತು ಪಾವತಿಗೆ ಒತ್ತಡ ಹಾಕುವ ಮೂಲಕ ಸಾಲಗಾರ ರೈತನಿಗೆ ಬ್ಯಾಂಕ್ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಬುಳ್ಳಾಪುರದ ಹನುಮಂತಪ್ಪ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಚನ್ನಗಿರಿ ತಾಲ್ಲೂಕು ಮಂಗೇನಹಳ್ಳಿ ಗ್ರಾಮದ ಕೆ.ಬಿ. ಬಸವರಾಜಪ್ಪ ತಂದೆ ದೊಡ್ಡ ಭರಮಪ್ಪ ಅವರು ಖಾಸಗಿ ಬ್ಯಾಂಕೊಂದರಿಂದ ಟ್ರ್ಯಾಕ್ಟರ್ ಖರೀದಿಸಲು 5,79,995 ರೂ.ಗಳನ್ನು ಸಾಲವಾಗಿ ಪಡೆದಿದ್ದರು. ಇದುವರೆಗೂ ಸಾಲವನ್ನು ಪ್ರತಿ ಕಂತಿನಂತೆ 86,200 ರೂ. ಪಾವತಿಸುತ್ತಾ ಬಂದಿದ್ದು, ಆರು ಕಂತುಗಳನ್ನು ಈವರೆಗೆ ಪಾವತಿ ಮಾಡಲಾಗಿದೆ. ಆದರೆ ಬ್ಯಾಂಕ್ ಅಧಿಕಾರಿಗಳು ಇನ್ನೂ 3,66,253.66 ರೂ. ಗಳು ಬಾಕಿ ಉಳಿದಿರುವುದಾಗಿ ಮತ್ತು ಶೀಘ್ರವೇ ಪಾವತಿಸುವಂತೆ ಒತ್ತಡ ಹೇರುತ್ತಿದ್ದಾರೆಂದು ತಿಳಿಸಿದರು.

ಸಂಘದ ಪದಾಧಿಕಾರಿಗಳು ಬ್ಯಾಂಕ್ ವ್ಯವಸ್ಥಾಪಕರನ್ನು ಭೇಟಿ ಮಾಡಿ ಈ ಬಗ್ಗೆ ವಿಚಾರಿಸಿದಾಗ ಬಾಕಿ ಹಣವನ್ನು ಪಾವತಿಸಲೇಬೇಕೆೆಂದು ಒತ್ತಡ ಹಾಕುತ್ತಿದ್ದಾರೆ. 

ಇದುವರೆಗೂ ಪಾವತಿ ಮಾಡಿದ ಮೊತ್ತದ ಬಗ್ಗೆ ತಿಳಿಸಿದಾಗ್ಯೂ ರೈತರಿಗೆ ಮಾನಸಿಕವಾಗಿ ಹಿಂಸಿಸುತ್ತಿದ್ದಾರೆಂದು ದೂರಿದರು.

ಮಾನಸಿಕ ಹಿಂಸೆ ಸಹಿಸಲಾಗದೇ ಸಾಲಗಾರ ರೈತನ ಪುತ್ರ ಲಿಂಗರಾಜ್ ವಿಷ ಕುಡಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಗನ ಚಿಕಿತ್ಸೆಗಾಗಿ ಮತ್ತೆ ಸಾಲ ಮಾಡಿದ್ದಾರೆ ಎಂದರು.

ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶಿಸಿ ಪ್ರಕರಣವನ್ನು ಸಂಪೂರ್ಣವಾಗಿ ಪರಿಶೀಲಿಸಿ, ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಿ, ಪರಿಹಾರ ನೀಡಬೇಕು. ಅ.24 ರೊಳಗಾಗಿ ಜಿಲ್ಲಾಡಳಿತ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗೇನಹಳ್ಳಿ ಬಸವರಾಜಪ್ಪ, ಕೊಗ್ಗನೂರು ಹನುಮಂತಪ್ಪ, ಕರಿಲಕ್ಕೇನಹಳ್ಳಿ ರೇವಣಸಿದ್ಧಪ್ಪ, ಕಂದಗಲ್ಲು ಪ್ರೇಮಕ್ಕ, ರಾಜಪ್ಪ ಕರಿಲಕ್ಕೇನಹಳ್ಳಿ, ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!