ಪಕ್ಷ ಕಟ್ಟಿ ಬೆಳೆಸಿದವನನ್ನು ಮೂಲೆ ಗುಂಪು ಮಾಡುವ ಕೆಲಸ ಮಾಡಲಾಗುತ್ತಿದೆ. ಈಗ ನಾನು ಟಿಕೆಟ್ ಆಕಾಂಕ್ಷಿ ಎಂದಿದ್ದಕ್ಕೆ ನನ್ನನ್ನು ಟಾರ್ಗೆಟ್ ಮಾಡಲಾಗಿದೆ. ಆದರೆ, ನನ್ನನ್ನು ಮುಗಿಸಲು ಸಾಧ್ಯವಿಲ್ಲ.
-ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವ
ದಾವಣಗೆರೆ, ಅ. 18- ಜಿಲ್ಲೆಯಲ್ಲಿ ಹಿರಿಯರನ್ನು ಕಡೆಗಣಿಸಿದ್ದು ನೋವಾಗಿದೆ. ಹಾಗಂತ ನಾನು ಯಾವುದೇ ಅತೃಪ್ತರ ಟೀಮ್‍ನ ನಾಯಕನಲ್ಲ. ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ. ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಪ್ರಬಲ ಆಕಾಂಕ್ಷಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಹಾಲಿ ಸಂಸದರು, ಇರುವವರು ಇರಬಹುದು ಹೋಗುವವರು ಹೋಗ ಬಹುದು ಎಂದು ಹೇಳಿದ್ದಾರೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯಿಂದ ಟಿಕೆಟ್ ಯಾರಿಗೆ ಎಂದು ಘೋಷಣೆ ಮಾಡಿಲ್ಲ. ಅವರ ಬಗ್ಗೆ ನನಗೆ ಗೌರವವಿದೆ. ಅವರು ವಯಸ್ಸಿನಲ್ಲಿ ಹಿರಿಯರು, ಅವರು ಬಿಜೆಪಿಗೆ ಬರುವುದಕ್ಕಿಂತ ಮುಂಚೆಯಿಂದಲೇ ನಾನು ಬಿಜೆಪಿಯಲ್ಲಿದ್ದೆ ಎಂದರು.
ಮಾಡಾಳ್ ವಿರುಪಾಕ್ಷಪ್ಪ ಹಾಗೂ ಪುತ್ರ ಮಲ್ಲಿಕಾರ್ಜುನ್ ಅವರನ್ನು ಟಾರ್ಗೆಟ್ ಮಾಡಿ ಉಚ್ಚಾಟನೆ ಮಾಡಿಸಿದರು. ಗುರುಸಿದ್ದನಗೌಡ್ರು ದಾವಣಗೆರೆ ಜಿಲ್ಲಾಧ್ಯಕ್ಷರಾಗಿ ಪಕ್ಷ ಕಟ್ಟಿದರು. ಅವರನ್ನು ಅವರ ಮಕ್ಕಳನ್ನು ಟಾರ್ಗೆಟ್ ಮಾಡಿ ಮುಗಿಸಿದರು, ಮಾಡಾಳ್ ವಿರುಪಾಕ್ಷಪ್ಪ, ಗುರುಸಿದ್ದನಗೌಡ್ರು ಅವರ ಮನೆಗೆ ಭೇಟಿ ನೀಡಿದರೆ ಅದನ್ನು ತಪ್ಪು ಎಂದು ಹೇಳುತ್ತಾರೆ. ಪಕ್ಷ ಕಟ್ಟಿ ಬೆಳೆಸಿದವನನ್ನು ಮೂಲೆ ಗುಂಪು ಮಾಡುವ ಕೆಲಸ ಮಾಡುತ್ತಿದ್ದಾರೆಂದ ರೇಣುಕಾಚಾರ್ಯ, ಈಗ ನಾನು ಟಿಕೆಟ್ ಆಕಾಂಕ್ಷಿ ಎಂದಿದ್ದಕ್ಕೆ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ಆದರೆ, ನನ್ನನ್ನು ಮುಗಿಸಲು ಸಾಧ್ಯವಿಲ್ಲ ಎಂದರು.
ಯಡಿಯೂರಪ್ಪ ಪಕ್ಷ ಕಟ್ಟಿ ಬೆಳೆಸಿದರು. ಅವರನ್ನು ಕಡೆಗಣಿಸುತ್ತಿರುವುದು ಸೇರಿದಂತೆ ಬಿಜೆಪಿಯ ನಾಯಕತ್ವದ ದೌರ್ಬಲ್ಯ ಸೇರಿ ಸಾಕಷ್ಟು ವಿಷಯಗಳನ್ನು ನಾನು ಮಾತನಾಡಿದ್ದೇನೆ.
ಬಿಜೆಪಿ ಮುಳುಗುತ್ತಿರುವ ಹಡಗು ಎಂದು ನಾನು ಹೇಳಿಲ್ಲ. ಆದರೆ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಆ ರೀತಿ ವರದಿಯಾಗಿದೆ. ಇದರಿಂದ ಕಾರ್ಯಕರ್ತರಿಗೆ, ಮುಖಂಡರಿಗೆ ನೋವಾಗಿದ್ದರೆ ನಾನು ಅವರ ಬಳಿ ಕ್ಷಮೆ ಯಾಚಿಸುತ್ತೇನೆ ಎಂದರು.
ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತೆಂದು ಎಲ್ಲೂ ಹೇಳಿಲ್ಲ.ಇದೆಲ್ಲಾ ಊಹಾಪೋಹ ಅಷ್ಟೇ ಎಂದ ರೇಣುಕಾಚಾರ್ಯ, ನಾನು ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕುಗಳನ್ನು ಬರಗಾಲದ ಪಟ್ಟಿಗೆ ಸೇರಿಸುವಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಕಂದಾಯ ಸಚಿವ ಕೃಷ್ಣ ಭೈರೇಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿದ್ದೆ. ಅದೇ ರೀತಿ ಸಚಿವರಾದ ಬೋಸರಾಜು, ಸತೀಶ್ ಜಾರಕಿಹೊಳಿ, ಮಧು ಬಂಗಾರಪ್ಪನವರನ್ನು ನನ್ನ ಅವಧಿಯಲ್ಲಿ ಮಂಜೂರಾದ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡುವಂತೆ ಭೇಟಿ ಮಾಡಿದ್ದೇನೆಯೇ ವಿನಃ ಕಾಂಗ್ರೆಸ್ ಸೇರಲು ಅಲ್ಲ ಎಂದರು.
ಚುನಾವಣೆಯಲ್ಲಿ ಸೋತ ಬಳಿಕ ನಾನು ಮನೆಯಲ್ಲಿ ಕೂತಿಲ್ಲ. ಬದಲಾಗಿ ಅವಳಿ ತಾಲ್ಲೂಕಿನಾದ್ಯಂತ ಪ್ರವಾಸ ಮಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 9 ನೇ ವರ್ಷದ ಸಾಧನೆಯ ಕರಪತ್ರವನ್ನು ಮನೆ – ಮನೆಗೂ ವಿತರಿಸಿದ್ದೇನೆ ಎಂದರು. ಜನಾದೇಶ ಅವರ ಪರವಾಗಿ ಬಂದಿದ್ದು, ಹೊನ್ನಾಳಿ -ನ್ಯಾಮತಿ ಅವಳಿ ತಾಲ್ಲೂಕಿನಲ್ಲಿ ಅವರು ಒಳ್ಳೆಯ ಕೆಲಸ ಮಾಡಲಿ. ಅವರ ಒಳ್ಳೆಯ ಕೆಲಸಕ್ಕೆ ನನ್ನ ಸಹಕಾರ ಇದೆ ಎಂದರು.