ದಾವಣಗೆರೆ, ಅ.16- ನಗರದಲ್ಲಿ ಗಣೇಶ ಮೂರ್ತಿ ಶೋಭಾಯಾತ್ರೆಗಾಗಿ ರಸ್ತೆಯಲ್ಲಿ ಅಲಂ ಕಾರ ಮಾಡುವ ಸಮಯದಲ್ಲಿ ಪ್ರಾಣ ಕಳೆದುಕೊಂಡ ಪೃಥ್ವಿರಾಜ್ ಕುಟುಂಬಕ್ಕೆ ಸಂಘಟಕರು ಕನಿಷ್ಟ 30 ಲಕ್ಷ ರೂ. ಪರಿಹಾರ ಕೊಡಬೇಕೆಂದು ಸಿ.ಪಿ.ಐ. (ಎಂ) ಪಕ್ಷ ಒತ್ತಾಯ ಮಾಡಿದೆ.
ಕಾರ್ಯಕ್ರಮ ನಡೆಸುತ್ತಿದ್ದ ಸಂಘಟನೆಯ ಆಯೋಜಕರು ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸದೇ ಇದ್ದು, ಘಟನೆಯು ಸಿ.ಸಿ. ಕ್ಯಾಮರಾದ ವಿಡಿಯೋದಲ್ಲಿ ಸೆರೆಯಾಗಿರುತ್ತದೆ, ಸಂಘಟಕರ ಈ ಅಜಾಗರೂಕತೆಯಿಂದಾಗಿ 26 ವರ್ಷದ ಯುವ ಕಾರ್ಮಿಕ ಪೃಥ್ವಿರಾಜ್ ಕ್ರೇನ್‌ಗೆ ಸಿಕ್ಕು ಪ್ರಾಣ ಕಳೆದುಕೊಂಡಿರುತ್ತಾರೆ. ಇವರನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಕುಟುಂಬಕ್ಕೆ ಆಧಾರ ಸ್ತಂಭವೇ ಇಲ್ಲವಾಗಿದೆ. ಆದ್ದರಿಂದ ಯುವ ಕಾರ್ಮಿಕ ಪೃಥ್ವಿರಾಜ್ ಇವರ ಕುಟುಂಬಕ್ಕೆ ಕಾರ್ಯಕ್ರಮದ ಸಂಘಟಕರು ರೂ. 30 ಲಕ್ಷ ಪರಿಹಾರ ಕೊಡಬೇಕೆಂದು ಸಿ.ಪಿ.ಐ. (ಎಂ) ಪಕ್ಷ ಒತ್ತಾಯ ಮಾಡುತ್ತದೆ.
ಸೌಹಾರ್ದಯುತವಾಗಿ ನಡೆಯಬೇಕಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕಾರ್ಯಕ್ರಮಕ್ಕೆ ಸಂಬಂಧವೇ ಇಲ್ಲದ ಫೋಟೋಗಳ ಪ್ರದರ್ಶನ ಮಾಡುವುದು, ಅನಗತ್ಯ ಪ್ರಚೋದನೆ ಮಾಡುವುದು ಸರಿಯಲ್ಲ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ಹೆಚ್. ಆನಂದರಾಜು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.