ದಾವಣಗೆರೆ, ಅ.12 – ಇದೇ ದಿನಾಂಕ 16 ರ ಸೋಮವಾರ ಬೆಳಿಗ್ಗೆ 10 ಗಂಟೆಗೆ ನಗರದ ಹೈಸ್ಕೂಲ್ ಮೈದಾನದಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ತಿಳಿಸಿದರು.
ತಮ್ಮ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಎರಡು ತಿಂಗಳಿಗೊಮ್ಮೆ ಉದ್ಯೋಗ ಮೇಳ ಆಯೋಜಿಸಲು ನಿರ್ಧರಿಸಲಾಗಿದೆ. 150ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. 500-1000 ಜನರಿಗೆ ಉದ್ಯೋಗಾವಕಾಶದ ನಿರೀಕ್ಷೆ ಇದೆ ಎಂದು ಹೇಳಿದರು.
ಕನಿಷ್ಠ ಎಸ್.ಎಸ್.ಎಲ್.ಸಿ. ವ್ಯಾಸಂಗ ಮಾಡಿದ 18 ವರ್ಷ ಮೀರಿದವರು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು. ಕ್ಯೂ.ಆರ್. ಕೋಡ್ ಮೂಲಕ ಇಲ್ಲವೇ ಸ್ಥಳದಲ್ಲೇ ನೋಂದಣಿಗೆ ಅವಕಾಶ ಇದೆ ಎಂದರು.
ಅಭ್ಯರ್ಥಿಗಳು ತಮ್ಮ ಸ್ವವಿವರ ಹಾಗೂ ಮೂಲ ದಾಖಲಾತಿಗಳೊಂದಿಗೆ ಭಾಗವಹಿಸಬೇಕು. ಆಧಾರ್ ಕಾರ್ಡ್ ಮತ್ತು ಕನಿಷ್ಠ 20 ಬಯೋಡಾಟಾಗಳೊಂದಿಗೆ ಮೇಳಕ್ಕೆ ಬರಬೇಕು. ಮೇಳದ ನೋಂದಣಿ ಸಂಪೂರ್ಣ ಉಚಿತ ಎಂದು ಜಿಲ್ಲಾಧಿಕಾರಿ ಹೇಳಿದರು.
ಹೆಚ್ಚಿನ ವಿವರಗಳಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಅಥವಾ ಜಿಲ್ಲಾ ಕೌಶಲ್ಯ ಮಿಷನ್ ಕಚೇರಿ ಸಂಪರ್ಕಿಸಬಹುದು. ಸಂಪರ್ಕ ಸಂಖ್ಯೆ : 99166619000, 9900897638 ಹಾಗೂ 9482282678 ಸಂಪರ್ಕಿಸಬಹುದು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ಸುರೇಶ್ ಇಟ್ನಾಳ್, ಜಿಲ್ಲಾ ಕೌಶಲ್ಯ ಅಧಿಕಾರಿ ಬಸವನಗೌಡ ಮತ್ತಿತರರು ಉಪಸ್ಥಿತರಿದ್ದರು.