14 ರಂದು ಹಿಂದೂ ಮಹಾಗಣಪತಿ ವಿಸರ್ಜನೆ, ಬೃಹತ್ ಶೋಭಾಯಾತ್ರೆ

ಚಿತ್ರನಟರ ಬಾವುಟ ಬೇಡ

ಶೋಭಾಯಾತ್ರೆಯಲ್ಲಿ ಪ್ರದರ್ಶನ ಮಾಡಲು ಈಗಾಗಲೇ ಕೆಲವರು ಚಿತ್ರನಟರ ಬಾವುಟಗಳನ್ನು ಮಾಡಿಟ್ಟು ಕೊಂಡಿರುವುದು ತಿಳಿದಿದೆ. ಆದರೆ ಯಾರೂ ಚಿತ್ರನಟ ಅಥವಾ ಜನ ಪ್ರತಿನಿಧಿಗಳ ಭಾವಚಿತ್ರಗಳನ್ನು ಪ್ರದ ರ್ಶಿಸಬಾರದು. ಕೇಸರಿ ಬಾವುಟ ಅಥವಾ ಗಣಪತಿ ಬಾವುಟಗಳನ್ನು ಪ್ರದರ್ಶಿಸುವಂತೆ ಜೊಳ್ಳಿ ಗುರು ಮನವಿ ಮಾಡಿದ್ದಾರೆ.

ದಾವಣಗೆರೆ, ಅ.9- ಇದೇ ದಿನಾಂಕ 14ರ ಶನಿವಾರ ನಗರದ ಹಿಂದೂ ಮಹಾಗಣಪತಿ ವಿಸರ್ಜನೆ ಅಂಗವಾಗಿ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಮಹಾಗಣಪತಿ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಜೊಳ್ಳಿ ಗುರು ತಿಳಿಸಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ದಿನಾಂಕ 10ರ ಮಂಗಳವಾರ ಸಾರ್ವಜನಿಕ ಹಿಂದೂ ಮಹಾಗಣಪತಿ ವತಿಯಿಂದ ಸುಮಾರು 30 ಸಾವಿರ ಜನರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಇದೇ ದಿನಾಂಕ 12ರ ಗುರುವಾರ ಬೃಹತ್ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದ್ದು, ಹೈಸ್ಕೂಲ್ ಮೈದಾನದಿಂದ ಬೆಳಿಗ್ಗೆ 11.30ಕ್ಕೆ ಆರಂಭವಾಗುವ ರ್ಯಾಲಿ, ಕೋರ್ಟ್ ರಸ್ತೆ ಮೂಲಕ ಗಡಿಯಾರ ಕಂಬ, ಕಾಳಿಕಾದೇವಿ ರಸ್ತೆ, ದುರ್ಗಾಂಬಿಕಾ ದೇವಸ್ಥಾನ, ಹೊಂಡದ ವೃತ್ತ, ಪಿ.ಬಿ. ರಸ್ತೆ, ವಿನೋಬನಗರ 2ನೇ ಮೇನ್, ವಾಟರ್ ಟ್ಯಾಂಕ್ ರಸ್ತೆ ಮೂಲಕ ಬಿಐಇಟಿ ಕಾಲೇಜು ರಸ್ತೆ, ನೂತನ ಕಾಲೇಜು ರಸ್ತೆ, ವಿದ್ಯಾನಗರ, ಹದಡಿ ರಸ್ತೆ, ನಿಟುವಳ್ಳಿ ದುರ್ಗಾಂಬಿಕಾ ದೇವಸ್ಥಾನ, ಹೆಚ್ಕೆಆರ್ ವೃತ್ತ, ಕೆಟಿಜೆ ನಗರ, ಶಿವಪ್ಪಯ್ಯ ಸರ್ಕಲ್, ಜಯದೇವ ವೃತ್ತದ ಮೂಲಕ ಹೈಸ್ಕೂಲ್ ಮೈದಾನ ತಲುಪಲಿದೆ ಎಂದು ಹೇಳಿದರು.

ದಿನಾಂಕ 14ರ ಶನಿವಾರ ನಡೆಯುವ ಬೃಹತ್ ಶೋಭಾ ಯಾತ್ರೆ ಬೆಳಿಗ್ಗೆ 10 ರಿಂದ ಆರಂಭವಾಗುವುದು. ಜಿಲ್ಲೆಯ ಸಂಸದರು, ಶಾಸಕರುಗಳು, ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಕಲಾ ತಂಡಗಳು ಮೆರವಣಿಗೆಯಲ್ಲಿರಲಿವೆ ಎಂದು ಹೇಳಿದರು.

ಶೋಭಾಯಾತ್ರೆಯು ಎವಿಕೆ ಕಾಲೇಜು ರಸ್ತೆ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಲಾಯರ್ ರಸ್ತೆ, ಪಿ.ಬಿ. ರಸ್ತೆ ಮೂಲಕ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕೊನೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಚಿತ್ರದುರ್ಗದಲ್ಲಿ ಶೋಭಾಯಾತ್ರೆ ಯಶಸ್ವಿಗೊಳಿಸಿದಂತೆ ನಗರದಲ್ಲಿಯೂ ಸಹ ಸಾರ್ವಜನಿಕರು ಭಾಗವಹಿಸುವ ಮೂಲಕ ಯಾತ್ರೆ ಯಶಸ್ವಿಗೊಳಿಸಬೇಕು. ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದು ಜೊಳ್ಳಿ ಗುರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀನಿವಾಸ ದಾಸಕರಿಯಪ್ಪ, ಮಾಗಿ ಜಯಪ್ರಕಾಶ್, ಡಿ.ಜಿ. ಮಂಜುನಾಥ್, ಕುಮಾರ್, ಸಿದ್ದಣ್ಣ ಇತರರು ಇದ್ದರು.

error: Content is protected !!